ಅಪರೂಪದ ಪುರಾಣ ಕತೆಗಳು ಪ್ರತಿಕ್ರಿಯೆ / Feedback

‘ಅಪರೂಪದ ಪುರಾಣ ಕಥೆಗಳು’ ಆಯ್ದ ಪುರಾಣ ಪ್ರಸಂಗಗಳ ಸಂಚಯನ ಕೋಶ. ಇದನ್ನು ಕಟ್ಟಿ ಕೋದು ನಮ್ಮ ಮುಂದಿಟ್ಟವರು ಕನ್ನಡದ ಖ್ಯಾತ, ಮಹತ್ವದ ಕಾದಂಬರಿಗಾರ್ತಿ, ಕನ್ನಡ ಕಾದಂಬರಿಗೆ ‘ಆವರ್ತ’ದ ಮೂಲಕ ಹೊಸಲೋಕವಿಸ್ತಾರ ತೆರೆದ ಶ್ರೀಮತಿ ಆಶಾರಘು. ಸಂಸ್ಕöÈತದ ಮಹಾಭಾರತ, ರಾಮಾಯಣ, ಭಾಗವತ, ಕಥಾಸರಿತ್ಸಾಗರಗಳು ಒಂದು ಬಗೆಯ ಕಥಾಕೋಶಗಳೆಂದರೂ ಸರಿಯೆ. ಅವುಗಳಲ್ಲಿ ಆಕರ್ಷಕವಾದ ಕತೆಯಿರುತ್ತವೆ, ಕಥಾಪ್ರಸಂಗಗಳಿರುತ್ತವೆ. ಇವು ಬರಿಯ ಕಥೆಯಷ್ಟೇ ಅಲ್ಲ, ಮನುಷ್ಯನ ವಿಶಿಷ್ಟ ನಡವಳಿಕೆಗೆ, ಆಲೋಚನೆಗೆ ಹಿಡಿದ ಕನ್ನಡಿ. ಅವು ನಮ್ಮ ಬದುಕಿಗೆ ಬೇಕಾದ ‘ಬೆಳಕಿನ ಬೀಜ’ಗಳು. ಹೀಗೆ ನಮ್ಮ ಪುರಾತನರು ಸಂಗ್ರಹಿಸಿಟ್ಟ ಈ ಬೀಜಗಳನ್ನು ಇಂದಿನವರ ಬದುಕಿಗೆ ಅವಶ್ಯವಾದ ‘ಜೀವಧಾನ್ಯ’ವನ್ನಾಗಿಸುವ ಮಹತ್ವದ ಪ್ರಯತ್ನ ಇಲ್ಲಿ ಆಶಾರಘು ಅವರಿಂದ ನಡೆದಿದೆ. ಅದಕ್ಕಾಗಿ ಅವರನ್ನು ಅಭಿಮಾನದಿಂದ ಅಭಿನಂದಿಸುತ್ತೇನೆ.
ಡಾ. ಗಾಯತ್ರೀ ನಾವಡ
***

ಪ್ರಸ್ತುತ ಕೃತಿ ಹೆಸರೇ ಹೇಳುವಂತೆ ಅಪರೂಪದ ೪೮ ಪುರಾಣ ಪುಣ್ಯ ಕಥೆಗಳನ್ನು ಈ ಕೃತಿ ಒಳಗೊಂಡಿದೆ. ‘ಹ್ಯಾರಿ ಪಾಟರ್’ ಸರಣಿಯ ಪುಸ್ತಕಗಳನ್ನು ಓದುವ ಇಂದಿನ ಪೀಳಿಗೆಯವರಿಗೆ ನಮ್ಮ ಪರಂಪರೆಯ ಕಥೆಗಳು ಗೊತ್ತಿರಬೇಕು ಎಂಬುದು ಆಶಾ ರಘು ಅವರ ಹಂಬಲ! ತಮ್ಮ ಇಬ್ಬರು ಅಜ್ಜಿಯರು ಹೇಳಿದ ಪುರಾಣ ಕಥೆಗಳನ್ನು ಕೇಳಿಯೇ ಬೆಳೆದ ಆಶಾ ರಘು ಅವರು ಪುರಾಣದ ಮತ್ತಷ್ಟು ಕಥೆಗಳನ್ನು ಮುಂದಿಟ್ಟು , ಸಾಂಸ್ಕೃತಿಕ ಪರಂಪರೆಯನ್ನು ಓದುಗರೆದುರು ತೆರೆದಿಡುತ್ತಾರೆ.
ಸಿ ಬಿ ಶೈಲಾ ಜಯಕುಮಾರ್
***

ಇದೊಂದು ವಿಭಿನ್ನವಾದ ಕಥಾಗುಚ್ಛ. ಪುರಾಣದ ಅಪರೂಪ ವ್ಯಕ್ತಿಗಳ ಆಸಕ್ತಿಕರ ವಿಷಯಗಳು ಈ ಕಥೆಗಳಲ್ಲಿ ಅಡಗಿವೆ. ಮತ್ತೆ ಮತ್ತೆ ಓದಬಹುದಾದ ಪುಸ್ತಕ. ಇದನ್ನು ರಾಮಾಯಣ, ಮಹಾಭಾರತ ಹಾಗೂ ಕಥಾಸರಿತ್ಸಾಗರದ ಚಿಕ್ಕ ಕೈಪಿಡಿ ಎನ್ನಬಹುದು. ಇದರಲ್ಲಿ ೪೮ ಪುಟ್ಟ ಕಥೆಗಳಿವೆ. ಈ ಕಥೆಗಳ ಶೀರ್ಷಿಕೆಗಳು ಓದುಗರಲ್ಲಿ ಆಸಕ್ತಿ ಮೂಡಿಸುತ್ತವೆ. ಇವೆಲ್ಲಾ ಪುರಾಣ ಆಧಾರಿತ ಕಥೆಗಳಾದ್ದರಿಂದ ವಿಷಯಗಳ ಅಧಿಕೃತತೆ ಕಾಪಾಡಿಕೊಳ್ಳುವುದು ಬಹುಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಲೇಖಕರು ಸಮರ್ಪಕವಾದ ಪೂರ್ವತಯಾರಿ ಮಾಡಿದ್ದಾರೆಂಬುದು ಅವರ ಕಥಾನಿರೂಪಣೆಯಲ್ಲಿ ವ್ಯಕ್ತವಾಗಿದೆ.
ಮಹೇಶ ಅರಬಳ್ಳಿ