ಪುಸ್ತಕದ ವಿವರ:
ಆವರ್ತ ವೇದೋತ್ತರ ಕಾಲಘಟ್ಟದ ಕಾಲ್ಪನಿಕ ಕಾದಂಬರಿ. ಆಶಾ ರಘು ಅವರು ಯಾವುದೇ ಪುರಾಣವನ್ನಾಗಲೀ ಅಥವಾ ಇತಿಹಾಸವನ್ನಾಗಲೀ ಆಧರಿಸದೆ ರಚಿಸಿರುವ ಸ್ವತಂತ್ರವಾದ ತಾತ್ವಿಕ ಚಿಂತನೆಯ ಕೃತಿ ಇದು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳ ಸುಳಿಯಲ್ಲಿ ಸಿಕ್ಕಿಕೊಂಡು ತೊಳಲಾಡುವ, ಬಿಡಿಸಿಕೊಳ್ಳಲು ಯತ್ನಿಸುವ, ಕಡೆಗೆ ಒಳಗಿದ್ದೂ ಇರದ ಹದವನ್ನು ಕಂಡುಕೊಳ್ಳುವ ಪ್ರತೀಪನೆಂಬ ರಾಜನ ಬದುಕಿನ ಚಿತ್ರಣ ಈ ಕಾದಂಬರಿಯ ವಸ್ತು. ನಾನಾ ಕಾರಣಗಳಿಂದ ಎಲ್ಲ ಸಂಬಂಧಗಳಿಗೂ ವಿಮುಖನಾಗಿ ಆತ್ಮಜ್ಞಾನವನ್ನು ಅರಸುತ್ತಾ ಸಾಗುತ್ತಾನೆ. ಆದರೂ ಬಿಡದ ಮೋಹ ಪುನಃ ಲೌಕಿಕ ಬದುಕಿಗೆ ಎಳೆತರುತ್ತದೆ. ಒಂದರ ಹಿಂದೊಂದರಂತೆ ಎಲ್ಲ ಸಂಬಂಧಗಳೂ ಹಿಂಬಾಲಿಸುತ್ತವೆ. ಕಡೆಗೆ, ಆವರ್ತದ ಚಕ್ರದೊಳಗೆ ಬಂಧಿಯಾದರೂ ಮುಕ್ತನಾಗಿ, ಯೋಗಾಭೋಗಗಳ ಸಮನ್ವಯ ಸಾಧಿಸಬಹುದಾದ ಹೊಳಹಿನೊಂದಿಗೆ ಆತ್ಮಜ್ಞಾನಕ್ಕೂ, ಲೌಕಿಕ ಬದುಕಿಗೂ ಅಭಿಮುಖನಾಗುತ್ತಾನೆ.
ಈ ಕಾದಂಬರಿಯು ಮೊದಲ ಮುದ್ರಣವು 2014ರಲ್ಲಿ ಕಂಡಿದ್ದು, ಆ ವರ್ಷದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನವನ್ನೂ, ಸೂರ್ಯನಾರಾಯಣ ಚಡಗ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಮುಂದೆ ಮತ್ತೆರಡು ಮುದ್ರಣಗಳನ್ನು ಕಂಡಿರುವ ಈ ಕಾದಂಬರಿಗೆ ಬಂದಿರುವ ಅಭಿಪ್ರಾಯಗಳನ್ನು ಒಳಗೊಂಡ ‘ಆವರ್ತ-ಮಂಥನ’ ಎಂಬ ಇನ್ನೊಂದು ಸಂಗ್ರಹ ಕೃತಿಯೂ ಪ್ರಕಟಗೊಂಡಿರುವುದು ಈ ಕಾದಂಬರಿಯ ಹೆಗ್ಗಳಿಕೆ.