ಗತ- ಪ್ರತಿಕ್ರಿಯೆ / Feedback

ಪುನರ್ಜನ್ಮ ಪಡೆದ ಹೆಣ್ಣೊಬ್ಬಳು ಜವಾಬ್ದಾರಿ ಸ್ಥಾನದಲ್ಲಿ ನಿಂತು, ಗತಜನ್ಮದಲ್ಲಿ ಉಳಿಸಿಹೋಗಿದ್ದ ಕರ್ತವ್ಯಗಳನ್ನು ಪೂರೈಸಿದ ನಂತರವಷ್ಟೆ ಗುಹೆಯಲ್ಲಿ ಅದೃಶ್ಯಳಾಗುವ ಕತೆಯೊಂದನ್ನು ಆಶಾ ರಘು ಯಾವುದೇ ಗೊಂದಲಗಳಿಗೆ ’ಅನು’ ವು ಮಾಡಿಕೊಡದ ರೀತಿಯಲ್ಲಿ ’ಗತ’ ವನ್ನು ಸೃಷ್ಟಿಸಿದ್ದಾರೆ. ಒಂದೊಂದು ಘಟನೆ, ಒಂದೊಂದು ತಿರುವಿಗೂ ಪೂರಕ ಅಂಶಗಳನ್ನು ತುಂಬಿದ್ದಾರೆ. ಕೆಲವೊಂದು ಕಠಿಣ ಕಾರ್ಯಗಳನ್ನೂ ಇಲ್ಲಿ ’ಹೂವನ್ನೆತ್ತಿದಷ್ಟೇ ಹಗುರ’ ವಾಗಿಸಿದ್ದಾರೆ!
ಶ್ರೀ ಕೆ.ಭಗವಾನ್ ನಾರಾಯಣ
***
ಸಾವಿತ್ರಿಯ ಪಾತ್ರ ಕಡೆ ಕಡೆಗೆ ತುಂಬಾ ಇಷ್ಟವಾಯ್ತು.ಅವಳ ಸಹಾಯ ಹಸ್ತ ಮೆಚ್ಚಬೇಕಾದದ್ದು . ತನ್ನ ಮಕ್ಕಳಿರಲಿ, ಶಂಕರನಿಗೂ ಸಹ ಒಂದು ವ್ಯವಸ್ಥೆ ಮಾಡಿಕೊಟ್ಟ ನಂತರವೇ ತನ್ನ ಜವಾಬ್ದಾರಿ ಮುಗೀತು ಅಂತ ಅಂದುಕೊಳ್ಳುತ್ತಾಳಲ್ಲ, ಇದು ನನಗೆ ಕುಶಿ ಕೊಟ್ಟಿತು. ಕಾದಂಬರಿಯ concept ಅಪರೂಪದ್ದು ನಾನು ಈ ಬಗೆಗಿನ ಕತೆ, ಕಾದಂಬರಿ ಈ ವರೆಗೆ ಓದಿರಲಿಲ್ಲ.
ಗಿರಿಜಾ ಲಕ್ಷ್ಮಣರಾವ್
***
ಗತ ಪುನರ್ಜನ್ಮದ ರೋಚಕ ಕಾದಂಬರಿ… ಕಾದಂಬರಿಯ ಹೆಸರು ಹೇಳಿರುವಂತೆ ಇದೊಂದು ರೋಚಕ ವಿಭಿನ್ನವಾದ ಕಾದಂಬರಿ. ಇರೋದು ಸತ್ಯವೋ ಮಿತ್ಯವೋ ಗೊತ್ತಿಲ್ಲ.. ಆದರೆ ಈ ಕಾದಂಬರಿ ಓದುವಾಗ ಬೇಸರ ಆಗುವಂತೆ ಅಥವಾ ಕಟ್ಟುಕಥೆ ಅನ್ನುವಂತೆ ಭಾಸ ಆಗೋದೇ ಇಲ್ಲ. ಅಷ್ಟು ಸರಾಗವಾಗಿ ಓದಿಸಿಕೊಂಡು ಕುತೂಹಲ ಕೆರಳುವಂತೆ ಮಾಡುತ್ತದೆ.
ಮಾಧವಿ ಎಂ.ಎಸ್
***
ಆಕೆ ೧೯ ವರ್ಷಗಳ ಹಿಂದೆ ನಡೆದ ಕಥೆಯನ್ನು ಸವಿಸ್ತಾರವಾಗಿ ಹೇಳುತ್ತಾಳೆ .ಅಷ್ಟೇ ಅಲ್ಲದೆ ಅಲ್ಲಿ ಬಂದು ಸೇರಿದ ಎಲ್ಲಾ ಜನರ ಗುರುತು ಹಿಡಿದು ಹೆಸರು ಹೇಳುತ್ತಾಳೆ.ಹಾಗಾದರೆ ಅನು ಸಾವಿತ್ರಿಯ ಪುನರ್ಜನ್ಮವೇ? ಆಕೆ ಹೇಳಿದ ಕಥೆಯಾದರೂ ಏನು? ಅವಳು ಹೇಳಿದ ಕಥೆಯನ್ನು ಊರಿನ ಜನರು ನಂಬಿದರೆ? ನಡೆದದ್ದಾದರೂ ಏನು? ಈ ದಾನಪ್ಪ ಯಾರು? ತನ್ನ ಹಿಂದಿನ ಎಲ್ಲವನ್ನೂ ಹೇಳಿ ಮುಗಿಸಿದ ಅನುವಿನ ಈಗಿನ ನಿಲುವೇನು ಮನೆಯವರೊಂದಿಗೆ ಮರಳಿ ತನ್ನೂರಿಗೆ ಬಂದು ತನ್ನನ್ನು ಪ್ರೀತಿಸುತ್ತಿದ್ದ ರಾಜೇಶನನ್ನು ವರಿಸಿದಳೇ? ಅಥವಾ ಅಲ್ಲೇ ನೆಲೆಯಾದಳೇ? ತಿಳಿಯಬೇಕಾದರೆ ಓದಿ ‘ಗತ’.
ವಾಣಿಶ್ರೀ ವಿಘ್ನೇಶ್ ಕೊಂಚಾಡಿ
***
ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬ ಒಂದರಲ್ಲಿ ಜನಿಸಿದ್ದ ಅನುರಾಧ ಎಂಬ ಬಾಲಕಿ ತಾನು ಅನುರಾಧ ಅಲ್ಲ, ತಾನು ಸಾವಿತ್ರಿ, ತನ್ನ ಊರು ಕಮಲನಾಥಪುರ, ನನಗೆ ಗಂಡ, ಎರಡು ಹೆಣ್ಣು ಮಕ್ಕಳಿದ್ದಾರೆ ಎಂದು ಬಡಬಡಿಸುತ್ತಾ, ನಾನು ಅಲ್ಲಿಗೆ ಹೋಗಬೇಕು ಎಂದು ಚಡಪಡಿಸುತ್ತಾಳೆ. ಅದರ ನಿಜ ಪತ್ತೆ ಹಚ್ಚುವುದು ಕಾದಂಬರಿಯ ಒಂದು ಘಟ್ಟವಾದರೆ, ಅವಳು ಸಾವಿತ್ರಿಯಂತಾಗಿ ಹಿಂದಿನ ಜನ್ಮದ ಉಳಿದ ಭಾಗವನ್ನು ಮುಂದುವರಿಸಿದ ಎರಡನೆ ಘಟ್ಟದಲ್ಲಿ ಅವಳು ಅನುಭವಿಸುವ ಕಷ್ಟ ಕೋಟಲೆಗಳು ತೊಂದರೆಗಳು, ಗಂಡ ಸತ್ತ ಮೇಲೆ ಏಕಾಂಗಿಯಾಗಿ ಸಾಂಸಾರಿಕ ಕರ್ತವ್ಯ ನಿರ್ವಹಣೆ ಮಾಡುತ್ತಾ ತನ್ನ ಎಲ್ಲ ಜವಾಬ್ದಾರಿ ಕರ್ತವ್ಯಗಳನ್ನು ದೃಢಮನಸ್ಸಿನಿಂದ, ನಿಸ್ವಾರ್ಥ ಮನೋಭಾವದಿಂದ ನಿರ್ವಹಿಸಿ, ಎಲ್ಲದರಲ್ಲೂ ಸಫಲಳಾಗಿ ಕೊನೆಗೆ ಎಲ್ಲ ಮುಗಿದ ಮೇಲೆ ಯಾರ ಕೈಗೂ ಸಿಗದಂತೆ ಗುಹೆಯಲ್ಲಿ ಮರೆಯಾಗಿ ಹೋಗುವುದು ಚಿತ್ರಿತವಾಗಿದೆ. ಅನುರಾಧ ಸಾವಿತ್ರಿಯಾಗಿ ಬದುಕನ್ನು ನಿರ್ವಹಿಸುವ ರೀತಿ ಭಗವದ್ಗೀತೆಯಲ್ಲಿ ಬರುವ ನಿಷ್ಕಾಮ ಕರ್ಮದ ತತ್ತ್ವವನ್ನು ನೆನಪಿಗೆ ತರುತ್ತದೆ.
ಶ್ರೀ ಸಂಪಿಗೆ ತೋಂಟದಾರ್ಯ
***
‘ನಾಯಿ ನೆರಳು’ ಮತ್ತು ‘ಗತ’ದ ಹೋಲಿಕೆ, ಇವೆರಡೂ ಪೂರ್ವ ಜನ್ಮಕ್ಕೂ, ಪ್ರಸ್ತುತ ಜನ್ಮಕ್ಕೂ ಗಂಟು ಹಾಕುವ ಕಥಾ ಹಂದರ ಹೊಂದಿರುವುದರಿಂದ ಮಾತ್ರ. ಉಳಿದಂತೆ ಎರಡರ ಕಥಾ ಹೆಣಿಗೆ, ಹರಹು ಸಂಪೂರ್ಣ ವಿಭಿನ್ನ. ಉತ್ತರ – ದಕ್ಷಿಣದಂತೆ. ‘ನಾಯಿ ನೆರಳು’ ಅರಿಯುವಲ್ಲಿ ಬುದ್ಧಿಯ ಅಗತ್ಯತೆ ಬಹಳವಿದ್ದರೆ ‘ಗತ’ಕ್ಕೆ ಭಾವನೆಗಳ ಅಗತ್ಯತೆ ಇದೆ. ಇಲ್ಲಿ ಎಲ್ಲವೂ ಸ್ವಯಂ ಪ್ರಕಟಿತ.
ಗೀತಾ ಬಾಲು