
ಒಂದು ಚಾರಿತ್ರಿಕ ಹಿನ್ನೆಲೆಯಲ್ಲಿ ಬೆಳೆಯುವ ಕಥಾಹಂದರವು, ಅದರ ಪಾತ್ರಗಳ ನೆನಪುಗಳ ಸರಮಾಲೆಯಾಗಿಯೇ ಓದುಗನಿಗೆ ತೆರೆದುಕೊಳ್ಳುವುದು ಈ ಕಾದಂಬರಿಯ ಒಂದು ವಿಶೇಷ. ಬಲವಂತದಲ್ಲಿ ಪ್ರೀತಿಯನ್ನು ಪಡೆಯುವ ಛಲ, ನಿಧಿಯ ಬೇಟೆ, ಆಸ್ತಿಯ ಆಸೆ, ಸಿಂಹಾಸನದ ಉತ್ತರಾಧಿಕಾರಿಯ ಜನ್ಮ ರಹತ್ಯ ಮುಂತಾದ ಹೆಗ್ಗುರುತುಗಳಿಗೆ ಓದುಗನನ್ನು ಕಟ್ಟಿಹಾಕಿ, ಆ ಹೆಗ್ಗುರುತುಗಳ ನಕ್ಷೆಯೊಳಗೆ ಕತೆಯನ್ನು ಬೆಳೆಸುತ್ತಾರೆ ಆಶಾ.
ಡಾ.ಕೆ.ಎನ್.ಗಣೇಶಯ್ಯ
***
ಪ್ರಿಯ ಆಶಾ,
ನಿನ್ನ ಕಾದಂಬರಿ ‘ಮಾಯೆ’ಯನ್ನು ಓದಿ ಸಂತೋಷವಾಯಿತು. ರೋಚಕ ಕತೆ, ಸ್ವಾರಸ್ಯಕರ ನಿರೂಪಣೆ, ವಿಪುಲ ಕಲ್ಪನೆ, ವಿಶಾಲ ಕಥಾಭಿತ್ತಿಯ ಸುಸಂಬದ್ಧ ಹೆಣಿಗೆ, ವಿಭಿನ್ನ ಪಾತ್ರಗಳ ಮನೋಲೋಕದ ಆಳವಾದ ಗ್ರಹಿಕೆ ನಿಜಕ್ಕೂ ಮೆಚ್ಚಬೇಕಾದ್ದೇ. ಆದರೆ ಅಲ್ಲಲ್ಲಿ ಕತೆಗಾರ್ತಿಯ ಪೂರ್ವನಿಶ್ಚಿತ ಉದ್ದೇಶಕ್ಕೆ ಅಧೀನವಾಗಿ ಕತೆ ಮತ್ತು ಪಾತ್ರಗಳು ವರ್ತಿಸುತ್ತಿರುವಂತೆ ಹಾಗೂ ದಿಢೀರನೆ ಪರಿವರ್ತನೆಗೊಳ್ಳುವಂತೆ ನನಗೆ ತೋರಿತು. ಹಾಗೆಯೇ ಇದೊಂದು ಕಾಲ್ಪನಿಕ ಕತೆಯಾದ್ದರಿಂದ ಘಟನೆಗಳ ಸಾಧ್ಯಾಸಾಧ್ಯತೆಯೂ ಪ್ರಶ್ನಾತೀತವಾಗಿ ಉಳಿಯುತ್ತದೆ. ಇದು ನಾನು ಓದಿದ ನಿನ್ನ ಮೊದಲ ಕೃತಿ. ಸಮಕಾಲೀನ ವಾಸ್ತವವನ್ನು ಆಧರಿಸಿದ ನಿನ್ನ ಕತೆ, ಕಾದಂಬರಿಗಳನ್ನು ನೀನು ಹೇಗೆ ನಿರ್ವಹಿಸಿರಬಹುದು ಎಂಬುದನ್ನು ತಿಳಿಯುವ ಕುತೂಹಲ ನನಗಿದೆ. ಒಟ್ಟಾರೆಯಲ್ಲಿ ನೀನೊಬ್ಬ ಸಮರ್ಥ ಕತೆಗಾರ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡ ಕಥಾಲೋಕ ನಿನ್ನ ಇನ್ನಷ್ಟು ಮೌಲಿಕ ಕೃತಿಗಳಿಂದ ಶ್ರೀಮಂತಗೊಳ್ಳಲಿ ಎಂದು ಹಾರೈಸುತ್ತೇನೆ. ಅಭಿನಂದನೆಗಳು.
ಬಿ.ಆರ್.ಲಕ್ಷ್ಮಣರಾವ್
***
ಈ ಕಾದಂಬರಿಯಲ್ಲಿ ಏನಿಲ್ಲಾ? ಇದರಲ್ಲಿ ಪ್ರೀತಿ ಇದೆ, ಪ್ರೇಮ ಇದೆ, ವಂಚನೆ ಇದೆ, ರಾಜ ರಾಜರುಗಳ ಕತೆ ಇದೆ, ಒಬ್ಬರೊಬ್ಬರ ಮೇಲೆ ಮಸಲತ್ತು ಮಾಡುವುದು ಇದೆ, ನಿಧಿ ಹುಡುಕಾಟ ಇದೆ. ಭೂಮಿಗಾಗಿ ಬಡಿದಾಟವಿದೆ. ಎಲ್ಲಕ್ಕೂ ಮುಖ್ಯವಾಗಿ ಅಲ್ಲೊಂದು ಜೀವನದರ್ಶನ ಇದೆ, ಆತ್ಮವಿಮರ್ಶೆ ಇದೆ. ಆ ಪಾತ್ರ ಆತ್ಮವಿಮರ್ಶೆಯ ಮೂಲಕ ಆಸೆಯೇ ದುಃಖಕ್ಕೆ ಮೂಲ ಎಂದು ಕಂಡುಕೊಳ್ಳುತ್ತದೆ. ನಾವೇನು ಮಾತಾಡ್ತೀವೋ ಅದನ್ನು ಪಾತ್ರಗಳ ಮೂಲಕ ನೋಡ್ತಾಹೋಗ್ತೀವಿ. ಇದನ್ನು ದೊಡ್ಡವರಷ್ಟೇ ಅಲ್ಲ, ಮಕ್ಕಳಿಗೂ ಕೂಡಾ ಯಾವ ಸಂಕೋಚ ಇಲ್ಲದೆ ಕೊಟ್ಟು ಓದಿಸಬಹುದು.
ಶ್ರೀಮತಿ ಗಿರಿಜಾ ರೈಕ್ವ
***
ಗುಪ್ತನಿಧಿಯ ಸುಳಿವನ್ನು ಒಗಟಿನ ರೂಪದ ಜನಪದ ಹಾಡಿನ ಮೂಲಕ ತಿಳಿಸುವ ಜಾಣ್ಮೆ ಮೆಚ್ಚುವಂಥದ್ದು.ನಿಧಿಯನ್ನರಸುವಲ್ಲಿ ಗೆಳೆಯನಿಗೆ ದ್ರೋಹ ಮಾಡುವ ಜಯಕೀರ್ತಿಯ ಕುಟಿಲಯಾತ್ರೆಯ ಓಘ ರೋಚಕ.ಪ್ರತಿ ಊರಿಗೊಂದು ಹೆಸರು,ಪ್ರತಿ ವ್ಯಕ್ತಿಗೊಂದು ಹೆಸರು ನೀಡುವುದನ್ನು ಲೇಖಕಿ ಮರೆಯುವುದಿಲ್ಲ.ಆದರೂ ಸಹ ವಿಭಾನಗರ-ತಾರುಪುರಗಳ ರಾಜತಾಂತ್ರಿಕ ವಿವರಗಳತ್ತ ಹೆಚ್ಚು ಗಮನ ಹರಿಸಿದಂತಿಲ್ಲ.ಎರಡೂ ರಾಜ್ಯಗಳ ಸ್ಥಿತ್ಯಂತರಗಳು ಚಾರಿತ್ರಿಕ ವರದಿಗಳಂತೆ ಸರಿದು ಹೋಗುತ್ತವೆ. ಆದಾಗ್ಯೂ ‘ಮಾಯೆ’ ಎಂಬ ವಿಸ್ಮಯ ಮಾನವನ ಅದಃಪತನಕ್ಕೆ ಕಾರಣವಾಗುವಂತೆ ಔನ್ನತ್ಯಕ್ಕೂ ಏಣಿಯಾಗಬಲ್ಲದು ಎಂಬುದನ್ನು ಈ ಕಾದಂಬರಿ ಕಟ್ಟಿಕೊಡುವಲ್ಲಿ ಸಫಲವಾಗಿದೆ ಎಂದು ಸಂಕೋಚವಿಲ್ಲದೆ ಹೇಳಬಹುದು.
ಕೆ. ಭಗವಾನ್ ನಾರಾಯಣ
***
ʻಮಾಯೆʼ ಕಾದಂಬರಿ, ಓದುಗನಿಗೆ ತನ್ನ ಮುಖಾಮುಖಿಗೆ, ತನ್ನ ಇರಸರಿಕೆಯ ಸಿಂಹಾವಲೋಕನಕ್ಕೆ ಪ್ರೇರೇಪಿಸುವಂತಿರುವುದು ಅದರ ಶಕ್ತಿ. ಎಲ್ಲಿಯೂ ರಭಸವಾಗಿ ಭೋರ್ಗರೆಯದೆ, ತಣ್ಣಗೆ ಹರಿವ ನೀರಿನಂತೆ ಪ್ರವಹಿಸುವ ಆಶಾರ ಶೈಲಿ ನಿಧಾನಕ್ಕೆ ಚಿಂತನೆಗೆ ಹಚ್ಚುತ್ತದೆ. ಮಾಯೆ ಕವಿಯುವುದು, ಸರಿಯುವುದಕ್ಕೆ ಎಂಬುದು ಕಾದಂಬರಿಯ ಆಶಯ.
ನಿವೇದಿತಾ ವಿಜಯ್ ಎಚ್
***
ಕಥೆಗಾರ್ತಿ ಸೃಷ್ಟಿಸಿದ ಸ್ತ್ರೀಲೋಕಕ್ಕೆ ಇಲ್ಲಿ ತನ್ನದೇ ಆದ ವೈಶಿಷ್ಟ್ಯವಿದೆ. ಸ್ತ್ರೀವಾದವು ನಿರೂಪಿಸುವಂತೆ ಇಲ್ಲಿ ಎಲ್ಲ ಸ್ತ್ರೀಯರ ನಡುವೆ ಎದ್ದು ಕಾಣುವ ಸೋದರಿ ಭಾವವಿದೆ. ಸಾಂಪ್ರದಾಯಿಕ ನಂಬಿಕೆಯಂತೆ ‘ಎರಡು ಜಡೆಗಳು ಎಂದೂ ಜತೆಗಿರಲಾರವು’ ಎಂಬ ಹೇಳಿಕೆ ಇಲ್ಲಿ ಸುಳ್ಳಾಗಿದೆ. ಅಲ್ಲದೆ ಸ್ತ್ರೀಯರ ಬಗ್ಗೆ ಸಂಪ್ರದಾಯವು ಕಟ್ಟಿದ ಪೂರ್ವಗ್ರಹಗಳನ್ನು ಒಡೆಯುವ ಪಾತ್ರಗಳೂ ಇಲ್ಲಿವೆ. ಇಲ್ಲಿನ ಸ್ತ್ರೀಯರಲ್ಲಿ ಕೈಕೇಯಿಯಾಗಲಿ ಮಂಥರೆಯಾಗಲಿ ಗಾಂಧಾರಿಯಾಗಲಿ ಇಲ್ಲ. ಮಂಗಳೆಗೆ ವೈಶಾಲಿಯ ಬಗ್ಗೆ ಕಾಳಜಿಯಿದೆ. ಮಹೇಶ್ವರಿ ವೈಶಾಲಿಗೆ ತನ್ನ ಜಾಣ್ಮೆಯನ್ನುಪಯೋಗಿಸಿ ಸಹಾಯ ಮಾಡುತ್ತಾಳೆ. ಪಾರ್ವತಿ ಸುಗುಣಾದೇವಿಯನ್ನು ತನಗೆ ಅಪಾಯವಿದ್ದರೂ ಲೆಕ್ಕಿಸದೆ ರಕ್ಷಿಸುತ್ತಾಳೆ. ಸನಕವ್ವ ಸೂಳೆಯಾಗಿದ್ದರೂ ಹಣದ ಬಗ್ಗೆ ಮೋಹ ಹೊಂದಿಲ್ಲ ಮಾತ್ರವಲ್ಲದೆ ವಚನಗಳನ್ನು ರಚಿಸುವಂಥ ಬುದ್ಧಿವಂತೆಯಾಗಿದ್ದಾಳೆ.
ಪಾರ್ವತಿ ಜಿ ಐತಾಳ್
***
ಹೆಣ್ಣು, ಹೊನ್ನು, ಮಣ್ಣು ಎಲ್ಲವೂ ಮಾಯೆ ಎಂದು ಎಲ್ಲರೂ ಹೇಳಿದ್ದಾರೆ. ಅದು ನಮಗೆಲ್ಲಾ ಚನ್ನಾಗಿ ಗೊತ್ತು. ಆದರೂ ಅದರ ಹಿಂದೆ ಹೋಗುವುದ ಬಿಡುವುದಿಲ್ಲಾ. ಅದರ ಆಕರ್ಷಣೆಯೇ ಹಾಗೆ, ಈ ಒಂದು ವಸ್ತುವನ್ನು ಮೂಲವಾಗಿರಿಸಿಕೊಂಡು ಸುಂದರವಾಗಿ ಬರೆದಿರುವ ಕಾದಂಬರಿಯೇ “ಮಾಯೆ”. ಮೊದಲು ಕೆಲವು ಪುಟಗಳನ್ನು ಓದುವಾಗ ಇದು ಒಂದು ಸಾಮಾಜಿಕ ಕಥೆಯ ಹಂದರ ಉಳ್ಳ ಕಾದಂಬರಿ ಎನ್ನಿಸುತ್ತದೆ. ಆದರೆ ಸ್ವಲ್ಪ ಪುಟಗಳ ನಂತರ ಒಂದು ಕೌತುಕದ ಕಥೆಯಾಗಿ ಪರಿವರ್ತನೆಗೊಂಡು ಓದುಗರನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ. ಇಲ್ಲಿ ಬರುವ ರಾಜಕೀಯ, ರಾಜರು ಹಾಗು ಅವರ ತಲೆಮಾರು ಎಲ್ಲಾ ಕಾಲ್ಪನಿಕವಾದರೂ ಅದನ್ನು ಅದ್ಭುತವಾಗಿ ಕಟ್ಟಿರುವ ಲೇಖಕರ ಕಲ್ಪನೆಯನ್ನು ಮೆಚ್ಚಬೇಕು. ಮಾಯೆಯ ಹಿಂದೆ ಹೋದವನ ಕೆಥೆಯನ್ನು ಹೇಳುತ್ತಾ ಅದರ ಜೊತೆಗೆ ಒಂದು ನವಿರಾದ ಪ್ರೇಮ, ಒಂದು ಗಟ್ಟಿ ಸ್ನೇಹ, ಪುತ್ರ ವಾತ್ಸಲ್ಯ ಎಲ್ಲವನ್ನೂ ಕಾದಂಬರಿಯಲ್ಲಿ ಹದವಾಗಿ ಉಣ ಬಡಿಸಿದ್ದಾರೆ.
ಆಶಾ ರಘು ಅವರಿಂದ ಇನ್ನೂ ಹೆಚ್ಚು ಹೆಚ್ಚು ಪುಸ್ತಕಗಳು ಬರಲಿ ಎಂದು ಆಶಿಸುತ್ತೇನೆ.
ಪ್ರದೀಪ್ ಬೇಲೂರು
***
ಕಾದಂಬರಿಯ ಕೊನೆಯಲ್ಲಿ ವೈಶಾಲಿ ಜಯಕೀರ್ತಿಯರನ್ನು ಮುಖಾಮುಖಿಯಾಗಿಸುವುದು ಇಬ್ಬರೂ ಪಡೆದ ಪಕ್ವವಾದ ಸ್ಥಿತಿಯನ್ನು ಸಂಕೇತಿಸುತ್ತದೆ. ವರ್ತಮಾನದಿಂದ ಭೂತಕ್ಕೆ ಚಲಿಸುವ ಸಿಂಹಾವಲೋಕನ ತಂತ್ರವನ್ನು ನಿರೂಪಣೆಗೆ ಬಳಸಿರುವುದು (ಜಯಕೀರ್ತಿ, ಮಂಗಳೆ, ವೈಶಾಲಿ, ಮದನ) ಕಾದಂಬರಿಗೆ ವಸ್ತುನಿಷ್ಠದೂರವನ್ನು ಕಾಯ್ದುಕೊಂಡು ಬರಲು ಸಹಾಯಕವಾಗಿದೆ. ಈಗಾಗಲೇ ಪರ್ವದಲ್ಲಿ ಇದರ ಯಶಸ್ವಿಯಾದ ಬಳಕೆಯನ್ನು ಕಾಣಬಹುದು.
ಡಾ. ರಘುನಾಥ್ ಕೃಷ್ಣಮಾಚಾರ್
***
ತಾತ್ವಿಕ ವಿಚಾರವೊಂದನ್ನು ಓದುಗರಿಗೆ ಮನದಟ್ಟು ಮಾಡಲು ಲೇಖಕರು ಎರಡು ವಿಭಿನ್ನ ಪಾತ್ರಗಳನ್ನು ಸೃಷ್ಟಿ ಮಾಡಿ, ಅವುಗಳ ಸುತ್ತಾ ಹಲವು ಸಂಗತಿಗಳನ್ನು, ಪ್ರಸಂಗಗಳನ್ನು, ಪ್ರದೇಶಗಳನ್ನು ಸೃಷ್ಟಿಸಿ, ಎರಡೂ ಪಾತ್ರಗಳ ಸ್ಪಂದನೆಗಳನ್ನೂ ವರ್ತನೆಗಳನ್ನೂ, ಮನೋಭಾವಗಳನ್ನೂ ರೂಪಿಸುತ್ತಾ ಹೋಗುತ್ತಾರೆ. ಸಾಂದರ್ಭಿಕವಾಗಿ ಕಥೆಗೆ ಇಂಬಾಗಲು ಬಗೆಬಗೆಯ ಬದುಕಿನ ಸಂಗತಿಗಳನ್ನು, ನೋಟಗಳನ್ನೂ ಒಳಗೊಂಡ ಬಗೆಬಗೆ ಪಾತ್ರಗಳು, ಸನ್ನಿವೇಶಗಳು ಬರುತ್ತವೆ. ಹಾಗಾಗಿ ಕಾದಂಬರಿ ಸಾಮಾಜಿಕ, ವೈಚಾರಿಕ, ಆಧ್ಯಾತ್ಮಿಕ ಐತಿಹಾಸಿಕ ಮತ್ತು ಕಾಲ್ಪನಿಕ ನೆಲೆಗಳಲ್ಲಿ ಹರಡಿಕೊಳ್ಳುತ್ತಾ ಸಾಗುತ್ತಾ ಓದುಗರಿಗೆ ರಸದೌತಣ ಬಡಿಸಲು ಪ್ರಯತ್ನಿಸುತ್ತದೆ.
ಸಂಪಿಗೆ ತೋಂಟದಾರ್ಯ
***
ಇದು ಸುಮಾರು ಹನ್ನೆರಡನೇ ಶತಮಾನಕ್ಕೆ ಸೇರಿದ ಕಲ್ಪಿತ ಇತಿಹಾಸ ಅಥವಾ ಜಾನಪದ ಪುರಾಣವೆನ್ನಬಹುದಾದ ಕಥೆ. ಈ ಕಲ್ಪಿತ ಇತಿಹಾಸವನ್ನು ವರ್ತಮಾನಕ್ಕೆ ಮುಖಾಮುಖಿಯಾಗಿಸುವ ರೀತಿಯಲ್ಲಿ ಈ ಕಥಾನಕವಿದೆ. ಅಂದರೆ ಇಲ್ಲಿನ ಪಾತ್ರಗಳ ಹೆಸರುಗಳು, ಸ್ಥಳಗಳ ಹೆಸರುಗಳು, ವಾತಾವರಣ ಮೊದಲಾದವೆಲ್ಲವೂ ಹಳೆಯ ಇತಿಹಾಸವನ್ನು ನೆನಪಿಸುತ್ತಿದ್ದು, ಕಥನ ಕ್ರಮ, ಇಲ್ಲಿನ ಪಾತ್ರಗಳ ಸನ್ನಿವೇಶಗಳ ನಿರೂಪಣಾ ಕ್ರಮವೆಲ್ಲ ವರ್ತಮಾನದ ಜೀವನ ವಿಧಾನದಂತಿದೆ.
ಸುಬ್ರಾಯ ಚೊಕ್ಕಾಡಿ
***
ಸರಿ- ತಪ್ಪು , ಇವೆರಡನ್ನು ಕಪ್ಪು ಬಿಳುಪಾಗಿ ತೋರಿಸುವ ಸಾಹಿತ್ಯಗಳಿವೆ. ತಪ್ಪು ಸರಿಗಳನ್ನು ಕೇವಲ ಈ ಎರಡು ಬಣ್ಣಗಳಿಗೆ ಹೋಲಿಸದೆ, ಗಾಢವಾದ – ಮಸುಕಾದ ಬಣ್ಣಗಳ ನಡುವೆ ಘಟನೆಯನ್ನು ವಿವರಿಸಿ, ಸರಿ ತಪ್ಪುಗಳಿಗು ಹೊಸ ಆಯಾಮ ನೀಡುವ ಸಾಹಿತ್ಯ, ಮನುಜನ ಮನೋವಿಜ್ಞಾನವನ್ನು ವಿವರಿಸುತ್ತದೆ. ಇಂತಹ ಸಾಹಿತ್ಯ ಓದುಗನನ್ನು ಜೀವನದ ಬಗ್ಗೆ ಆಲೋಚಿಸುವಂತೆ ಮಾಡುತ್ತದೆ. ನಮ್ಮ ಆಲೋಚನಾ ಸಾಮರ್ಥ್ಯ ಹೆಚ್ಚಿಸುವ ಸಾಹಿತ್ಯ ಇದು.
ಓದಿ ತುಂಬ ಖುಶಿಯಾಯಿತು.
ಸುವ್ರತಾ ಅಡಿಗ
***
ಒಟ್ಟಾರೆಯಾಗಿ ಕಾದಂಬರಿಕಾರರ ಈ ಕಲ್ಪನಾಶಕ್ತಿಯ ಔನ್ನತ್ಯಕ್ಕೆ ಮಾರು ಹೋಗದ ಓದುಗನು ಇರಲಿಕ್ಕಿಲ್ಲ. ಅದ್ಭುತ ಕಲ್ಪನೆಯ ಕೂಸು ಈ ಕಾದಂಬರಿಯಾಗಿದೆ. ಸುಖವೆಂಬುದು ಹೆಣ್ಣಿನ ಕುರಿತಾದ ವ್ಯಾಮೋಹದಿಂದ ಸಿಗುವ ವಸ್ತುವಲ್ಲ. ಅದು ನಮ್ಮ ನಮ್ಮ ಮನಸ್ಸಿನಲ್ಲಿಯೆ ಕಂಡುಕೊಳ್ಳಬೇಕು. ಇಂತಹ Fantasy ಕತೆಯನ್ನು ಹೆಣೆದು ಓದುಗರನ್ನು ಕಡೆಯ ಪುಟದವರೆಗೆ ಕುತೂಹಲಕಾರಿ ಕಥಾನಕದಿಂದ ಸೆಳೆಯುವ ಶೈಲಿ ನಿಜಕ್ಕೂ ಮೋಹಕವಾಗಿದೆ. ಅಭಿನಂದನೆಗಳು ಮತ್ತು ಧನ್ಯವಾದಗಳು ಕಾದಂಬರಿಕಾರರಿಗೆ.
ಉದಯಕುಮಾರ ಹಬ್ಬು
***
ಮಾಡಿದ ಎಲ್ಲ ಪಾಪಗಳಿಗೆ ಒಂಟಿಯಾಗಿಯೇ ಶಿಕ್ಷೆ ಅನುಭವಿಸಬೇಕು; ಅದೂ ನಿರಂತರ ಎಂಬುದರ ಸಂಕೇತವಾಗಿ ಜಯಕೀರ್ತಿಯ ಪಾತ್ರ, ಓದುಗರ ನೈತಿಕತೆಯನ್ನು ಬಡಿದೆಬ್ಬಿಸುತ್ತದೆ. ಭೌತಿಕ ಸಂಪತ್ತಿಗೆ ಆಸೆ ಪಡೆದೇ, ಇದ್ದಿದ್ದರಲ್ಲಿ ತೃಪ್ತಿ ಕಾಣುವ ಮನಸು ಸಂಕಟದಿಂದ ಪಾರಾಗುತ್ತದೆ. ತಾವೆಂದೂ ನಿರೀಕ್ಷಿಸದ ಸಹಾಯ ಪಡೆಯುತ್ತದೆ ಎಂಬುದನ್ನು ವೈಶಾಲಿಯ ಬಿಡುಗಡೆ, ಹಾಳು ಬಾವಿಯಿಂದ ಮದನನ ಪಾರಾಗುವ ಸನ್ನಿವೇಶಗಳು, ಕಾಣದ ಶಕ್ತಿಯೊಂದರ ಇರುವಿಕೆಯನ್ನು ಧ್ವನಿಸುತ್ತದೆ. ಶರಣ ಅಲ್ಲಮನ ‘ಮಾಯೆ’ ಪರಿಕಲ್ಪನೆಯ ನಿರ್ದಿಷ್ಟ ಚೌಕಟ್ಟು, ‘ಮನದ ಮುಂದಣ ಆಸೆಯೇ ಮಾಯೆ’ ಎಂಬ ಸಿದ್ಧ ವಸ್ತುವಿರುವ ಕಾರಣಕ್ಕೆ ಈ ಕಾದಂಬರಿಯ ಹರವು ಸರಾಗವಾಗಿದೆ. ಲೌಕಿಕ ಮೌಲ್ಯ ಹಾಗೂ ಅಂತಿಮ ಸತ್ಯದ ದರ್ಶನವೂ ನೀಡುತ್ತದೆ.
ವೆಂಕಟೇಶ ಮಾನು
***
ವಾಸ್ತವದ ಜೊತೆ ಜೊತೆಗೆ ನೆನಪುಗಳ ಮೆರವಣಿಗೆಯೊಂದಿಗೆ ಕಥೆ ಸಾಗುವ ರೀತಿ ನಿಜಕ್ಕೂ ಅದ್ಭುತವೇ ಸರಿ. ಎರಡು ವಿರುದ್ಧ ಪಾತ್ರಗಳ ಮೂಲಕ ಬದುಕಿನ ಹಲವಾರು ಸತ್ಯಗಳನ್ನು, ಸುಂದರವಾದ ಕಾಲ್ಪನಿಕ ಕಥೆಯೊಂದಿಗೆ ಹೆಣೆದು ಯಶಸ್ವಿಯಾಗಿದ್ದಾರೆ ಲೇಖಕಿ. ಓದುವಾಗ ೧೨ನೇ ಶತಮಾನದಲ್ಲಿ ಇಂತಹ ಒಂದು ನಿಜವಾದ ಘಟನೆ ನಡೆದಿದೆಯೇನೋ ಅನ್ನಿಸುತ್ತದೆ. ನಮ್ಮ ಪುರಾಣ ಕಥೆಗಳ ಬಗ್ಗೆ ಲೇಖಕಿಗೆ ಇರುವ ಅಪಾರವಾದ ಜ್ಞಾನವೇ ಇಂತಹ ಒಂದು ಅಪರೂಪದ ಮಹತ್ತ್ವದ ಕೃತಿಯನ್ನು ರಚಿಸಲು ಸಾಧ್ಯವಾಯಿತೇನೋ? ಸಾರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುವ ಕಥೆಯನ್ನು ಒಳಗೊಂಡಿರುವ ‘ಮಾಯೆ’ ಅಂದಿಗೂ, ಇಂದಿಗೂ, ಎಂದಿಗೂ ಪ್ರಸ್ತುತವೇ. ಇಂತಹ ಇನ್ನಷ್ಟು ಒಳ್ಳೆಯ ಕೃತಿಗಳು ಆಶಾ ರಘುರವರು ಬರೆಯುವಂತಾಗಿ ಕನ್ನಡ ಸಾಹಿತ್ಯಲೋಕ ಬೆಳಗಲಿ ಎಂಬುದೇ ನಮ್ಮೆಲ್ಲರ ಹಾರೈಕೆ.
ವಾಣಿಶ್ರೀ ಕೊಂಚಾಡಿ
***
‘ಮಾಯೆ’, ಹನ್ನೆರಡನೇ ಶತಮಾನದ ಕಥೆಯೊಂದನ್ನು ಹೊತ್ತಿದ್ದರೂ, ಅದು ಯಾವುದೇ ಕಾಲಕ್ಕೆ ಸೀಮಿತಗೊಳ್ಳದೆ ಸರ್ವಕಾಲಕ್ಕೂ ನೀತಿ ಪಾಠವಾಗಬಲ್ಲ ಕಥೆ. ಕಥೆಯಲ್ಲಿ ಮಾಯೆಯ ಮೂಲ ಆಸೆ ಎಂಬುದನ್ನು ಪ್ರತಿ ಪಾದಿಸುವುದೆ ಮೂಲ ಉದ್ದೇಶ ಆಗಿರುವುದರಿಂದ ಕಥನದಲ್ಲಿ ಕೇವಲ ಕಥೆಯಷ್ಟೇ ಬೇಕಿರುವುದರಿಂದ, ಇಲ್ಲಿ ಅಂದಿನ ಜೀವನ ಶೈಲಿಯಾಗಲೀ, ಪರಿಸರದ ವರ್ಣನೆಯಾಗಲೀ ಕಂಡು ಬಂದಿಲ್ಲ. ಇದು ಒಂದು ಬಗೆಯಲ್ಲಿ ಲೇಖಕಿಯ ಜಾಣ್ಮೆ ಎಂದೂ ಹೇಳಬಹುದು. ಆಡು ಭಾಷೆ ಕೂಡ ಹೆಚ್ಚು ವ್ಯತ್ಯಯವಿಲ್ಲ. ಕೆಲವು ವೇಷ ಭೂಷಣಗಳು, ಪದಾರ್ಥಗಳ ಹೆಸರು, ಅಡುಗೆ-ತಿಂಡಿಗಳ ಹೆಸರು, ಸ್ಥಳಗಳ ಹೆಸರು ಬಿಟ್ಟರೆ ಕಥೆ ಇಂದಿನ ಶತಮಾನಕ್ಕೆ ಕೂಡ ಹೊಂದಿಕೆ ಆಗುವಂತಿದೆ. ಸಜ್ಜನರು ಮತ್ತು ದುರ್ಜನರು ಶತ ಶತಮಾನಗಳು ಕಳೆದರೂ ಅಂದಿಗೂ, ಇಂದಿಗೂ, ಎಂದೆಂದಿಗೂ ಒಂದೇ ಎನ್ನುವುದನ್ನು ಪ್ರತಿಪಾದಿಸುವ ಕಥೆಯಿದು.
ಗೀತಾ ಬಾಲು