
’ಚಿತ್ತರಂಗ’ ದ ಶಿಲ್ಪ ನಿಜವಾಗಿಯೂ ಒಬ್ಬ ನುರಿತ ಕಲಾವಿದೆ, ಕಲಾವಿದ, ಕಾದಂಬರಿಕಾರ ಬರೆಯಬಹುದಾದ ಶಿಲ್ಪ. ಒಳ್ಳೆಯ ಸಂಭಾಷಣೆಗಳು, ಒಳ್ಳೆಯ ಪಾತ್ರಚಿತ್ರಣ ಮತ್ತು ಮನೋಲೋಕದ ಕೆಲವು ಅಂಶಗಳನ್ನೆಲ್ಲಾ ಬಹಳ ಸೊಗಸಾಗಿ ಇಡೀ ಕಾದಂಬರಿಯಲ್ಲಿ ಅವರು ಚಿತ್ರಿಸಿದ್ದಾರೆ.
ಅಗ್ರಹಾರ ಕೃಷ್ಣಮೂರ್ತಿ
***
ಚಿತ್ತರಂಗದಲ್ಲಿ ಇಡೀ ಕಥೆಯನ್ನು ತಾವು ಹೇಳದೆ ಪಾತ್ರಗಳ ಮೂಲಕ ಹೇಳಿಸಿರುವುದು ಕಥಾವಸ್ತುವಿಗೆ ಸರಿಯಾಗಿದೆ, ಅದೂ ಅಲ್ಲದೆ ಈ ಕಥೆ 60 ರಿಂದ 80 ರ ದಶಕದಲ್ಲಿ ನಿಜವಾಗಿ ಘಟಿಸಿದ್ದು ಲೇಖಕಿ ಆ ಎಳೆಯನಷ್ಟೇ ತೆಗೆದುಕೊಂಡು ತಮ್ಮದೇ ಕಥೆಯನ್ನು ಹೆಣೆದು ಓದುಗರು ಇಡೀ ಕಾದಂಬರಿಯನ್ನು ಎಲ್ಲೂ ನಿಲ್ಲಿಸದೆ ಓದಿಕೊಂಡು ಹೋಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕಾದಂಬರಿಯ ಕೊನೆಯಲ್ಲಿ ಅಹಲ್ಯಾಳ ಸಧ್ಯದ ಬದುಕಿನ ಸ್ಥಿತಿ ವಿವರಿಸಿರುವುದನ್ನು ಓದಿದರೆ ಮೋಡದೊಳಗಿನ ಉಳಿದ ಬಾಕಿ ಮಳೆ ಹನಿಗಳು ಇನ್ನಷ್ಟು ಬಿದ್ದು ನೀಲಾಕಾಶ ಗೋಚರಿಸಬಹುದಿತ್ತು ಎನಿಸುತ್ತದೆ.
ಚಂದ್ರಶೇಖರ್ ಕುಲಗಾಣ
***
ನಿಮ್ಮ ಚಿತ್ತರಂಗ ಕಾದಂಬರಿ ಓದಿ ಮುಗಿಸಿದೆ. ನಿಮ್ಮ ನಿರೂಪಣಾ ಶೈಲಿ, ಪಾತ್ರಗಳು ಕಥೆ ಹೇಳುವರೀತಿ ಬಹಳ ಇಷ್ಟವಾಯಿತು. ಅಂದಿನದಿನದ ಚಿತ್ರರಂಗದ ಒಳಪದರಗಳನ್ನು ಯಶಸ್ವಿಯಾಗಿ ಬಿಚ್ಚಿ ಇಟ್ಟಿದ್ದೀರ. ಅಭಿನಂದನೆಗಳು. ನೀವು ಚಿತ್ರರಂಗ, ನಾಟಕರಂಗ ಗಳಲ್ಲಿ ಕೆಲಸಮಾಡಿರುವವರು.ಇತ್ತೀಚೆಗೆ ಚಿತ್ರ ರಂಗ ಸಾಕಷ್ಟು ಬದಲಾಗಿದೆ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಚಿತ್ತರಂಗ ಭಾಗ2 ಬರೆಯಿರಿ. ನಿಮ್ಮಿಂದ ಖಂಡಿತಾ ಸಾಧ್ಯ. ಶುಭವಾಗಲಿ.
ಸಿ.ಎನ್.ಮುಕ್ತ
***
ಪುಟ್ಟಣ್ಣ ಕಣಗಾಲ್ ಅವರ ಜೀವನಕ್ಕೆ ಸಂಬಂಧಪಟ್ಟ ಸಿನಿಮಾ ಮಾಡಲು ಯೋಚಿಸಿದ್ದೆ. ಆಗಲಿಲ್ಲ. ಆದರೆ ಈಗ ನನ್ನ ಭರವಸೆ ಏನೆಂದರೆ, ಕಾದಂಬರಿ ಆಧಾರಿತ ಸಿನೆಮಾ ಮಾಡಬಹುದಲ್ಲಾ ಎಂದು! ಇದು ಸುಬ್ಬಣ್ಣನೋ, ಪುಟ್ಟಣ್ಣನೋ ಯಾರೇ ಆಗಿರಲಿ… ಪ್ರಶ್ನೆಯಲ್ಲ. ಆದರೆ ಈ ಕಾದಂಬರಿಯಲ್ಲಿರುವ ಅಂಶಗಳು ಏನಿವೆಯೋ, ಅವೆಲ್ಲವೂ ಸಿನೆಮ್ಯಾಟಿಕ್ ಆಗಿವೆ! ತುಂಬಾ ಅದ್ಭುತವಾಗಿದೆ! ಓದುತ್ತಾ ಹೋದರೆ ದೃಶ್ಯಗಳು ಕಣ್ಣ ಮುಂದೆ ಮೂಡುತ್ತಾ ಹೋಗುತ್ತದೆ. ನನಗೆ ಬಹಳ ಇಷ್ಟವಾಗುಬಿಟ್ಟಿದೆ. ಆದ್ದರಿಂದ ಒಂದು ಪ್ರಕಟಣೆ… ಈ ಕಾದಂಬರಿಯ ಹಕ್ಕನ್ನು ಆಶಾ ರಘು ಅವರು ಕೊಟ್ಟರೆ, ಇದನ್ನು ಸಿನೆಮಾ ಮಾಡುವಂತಹ ಎಲ್ಲ ಪ್ರಯತ್ನವನ್ನು ನಾನು ಮಾಡ್ತೀನಿ.
ಗಣೇಶ ಕಾಸರಗೋಡು
***
ಅಂತರಂಗ ಮತ್ತು ಬಹಿರಂಗವನ್ನು ಏಕಕಾಲಕ್ಕೆ ದರ್ಶನ ಮಾಡಿಸುವುದು ಅಷ್ಟು ಸುಲಭವಲ್ಲ. ಲೌಕಿಕದಲ್ಲಿ ಮುಳುಗಿದಾಗ ಅಲೌಕಿಕ ರುಚಿಸುವುದಿಲ್ಲ, ರಾಗ, ರತಿ, ಆಕರ್ಷಣೆ, ಅತಿರೇಕ ಮತ್ತು ಅನೂಹ್ಯಗಳ ಮೊತ್ತದಂತಿರುವ ಚಿತ್ತರಂಗ ಕಾದಂಬರಿಯ ಅಂತರಾಳದಲ್ಲಿರುವುದು ಸ್ಮೃತಿ-ವಿಸ್ಮೃತಿಗಳ ತಾಕಲಾಟ. ಕತ್ತಲು-ಬೆಳಕು, ಸತ್ಯ-ಸುಳ್ಳು, ಅಭಿನಯ-ವಾಸ್ತವ, ಜೀವನ-ನಾಟಕಗಳ ಸಮಗ್ರ ಚಿತ್ರ. ಅನುಭವಿ ಕಾದಂಬರಿಕಾರ್ತಿ ಆಶಾ ರಘು, ರಂಗಭೂಮಿ, ಕಿರುತೆರೆ, ಸಿನಿಮಾ, ಜೀವನ, ಪುರಾಣಗಳಿಂದ ಮೊಗೆದುಕೊಂಡ ಅನುಭವದ ಬೆಳಕಲ್ಲಿ ಚಿತ್ರಿಸಿದ ಈ ಕಾದಂಬರಿ ನನಗೆ ಹಲವು ಸತ್ಯಗಳನ್ನು ಹೊಳೆಯಿಸಿತು. ಅನುಭವವಾಗಿ ನನ್ನೊಳಗೆ ಇಳಿಯಿತು. ಇದು ಚಿತ್ತರಂಗದಲ್ಲಿ ನಡೆಯುವ ಮಹೋನ್ನತ ಚಿತ್ರರತ್ನ.
ಜೋಗಿ
***
ಇದು ನಾನು ಓದಿರುವ ಆಶಾ ರಘರವರ ಮೊದಲನೆಯ ಕಾದಂಬರಿ. ಚಿತ್ರರಂಗದಲ್ಲಿ ಮುಖ್ಯ ಪಾತ್ರವಾಗಿ ಸಿನಿಮಾ ನಿರ್ದೇಶಕನಾಗಿ ಸುಬ್ಬಣ್ಣನವರು ಕಾಣಿಸಿಕೊಳ್ಳುವುದಲ್ಲದೆ ಆತನ ಜೀವನದಲ್ಲಿ ಪ್ರವೇಶಿಸಿ ತನ್ನ ಜೀವನವನ್ನೇ ಬದಲಾಯಿಸಿರುವ ಕಸ್ತೂರಿ, ಅಹಲ್ಯ, ರಾಜೇಶ್ವರಿಯ ಜೀವನ ಚರಿತ್ರೆಯೂ ಇದೆ. ಲೇಖಕಿಯು ಈ ಕಾದಂಬರಿಯಲ್ಲಿ ಎಲ್ಲ ಪಾತ್ರಗಳಿಗೂ ಒಂದೊಂದು ಮಹತ್ವ ಕೊಟ್ಟಿದ್ದಾರೆ, ಸಿನಿಮಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವ ಸುಬ್ಬಣ್ಣ, ಕಸ್ತೂರಿ, ಅಹಲ್ಯ ಪಾತ್ರಗಳ ಅಂತರಂಗದ ಭಾವನೆಗಳನ್ನು ಹಾಗು ಅವರ ಪಾತ್ರಗಳ ಮೂಲಕ ಸಿನಿಮಾ ರಂಗದಲ್ಲಿ ಕಾಣುವ ಏರು ಪೇರುಗಳನ್ನು, ಅವರು ನಿಜ ಜೀವನದಲ್ಲಿ ಪಟ್ಟ ಸುಖ ದುಃಖಗಳನ್ನು , ಸಿನಿಮಾ ರಂಗಕ್ಕೆ ಬರಲು ಪಟ್ಟ ಸಾಹಸಗಳನ್ನು, ಬಂದು ಹೆಸರು ಗಳಿಸಿದ ನಂತರ ಕೆಲವರು ತಾವೇ ಎಲ್ಲಾ ಎಂದು ಬೀಗಿ ಕಡೆಯಲ್ಲಿ ತಮ್ಮ ಜೀವನವನ್ನು ದುರಂತಕ್ಕೀಡುಮಾಡಿಕೊಂಡಿರುವ ಘಟನೆಗಳನ್ನು, ಪ್ರೇಮದ ಬಲೆಗೆ ಬಿದ್ದು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡ ಹಲವು ಹೆಣ್ಣುಗಳ ಕಥೆಯನ್ನು ಈ ಎಲ್ಲಾ ಪಾತ್ರಗಳ ಮೂಲಕ ಸುಂದರವಾಗಿ ಚಿತ್ರಿಸಿದ್ದಾರೆ.
ಕಾರ್ತಿಕೇಯ ಭಟ್
***
ಕನ್ನಡ ಸಾಹಿತ್ಯ ರಂಗಕ್ಕೆ ಹಲವು ಉತ್ತಮ ರಚನೆಗಳನ್ನು ಸಮರ್ಪಿಸಿದ ಶ್ರೀಮತಿ ಆಶಾರಘು
ಅವರು ರಂಗಭೂಮಿ, ಬೆಳ್ಳಿತೆರೆ ಕಿರುತೆರೆಗಳಲ್ಲೂ ಸಾಕಷ್ಟು ಸಾಹಸಗಳನ್ನು ನಿರ್ವಹಿಸಿದವರು. ಇದೀಗ ‘ಚಿತ್ತ ರಂಗ ‘ ಕಾದಂಬರಿಯ ಮೂಲಕ ಚಿತ್ರ ರಂಗದ ಅಂತರಂಗದೊಳಗಣ ತೀರಾ ವಾಸ್ತವಕ್ಕೆ ಹತ್ತಿರವಾದ ಕಥಾನಕಕ್ಕೊಂದು ಧ್ವನಿ ಕೊಟ್ಟು ಓದುಗರೆದುರಿಗೆ ವಿಮರ್ಶೆಗೆ ದಿಟ್ಟತನದಿಂದ ಇಟ್ಟಿದ್ದಾರೆ. ಇದು ಒಂದು ಸೃಜನಶೀಲ ಕಲ್ಪಿತ ಕಾದಂಬರಿಯಷ್ಟೇ ಎಂದು ವಿನಯಪೂರ್ವಕ ಅರಿಕೆಯನ್ನೂ ಮಾಡುತ್ತ ಕಾದಂಬರಿಯ ಸಾಹಿತ್ಯಿಕ ಮೌಲ್ಯಮಾಪನ ಮಾಡಿದ್ದಾರೆ. ಸ್ತ್ರೀವಾದಿ ನೆಲೆಯಿಂದಲೂ, ನವೋತ್ತರ ಚಿಂತನೆಗಳಿಂದಲೂ, ವಸ್ತುನಿಷ್ಠ ಸಂಗತಿಗಳಿಂದಲೂ, ಕಲ್ಪನಾಶಕ್ತಿಯನ್ನು ಹಿಗ್ಗಿಸುತ್ತ, ಘಟನೆಯಾಧಾರಿತ ಸುಖವನ್ನೋ, ನೋವನ್ನೋ ಚಿತ್ರಿಸುವುದು ಅದು ನಿಜವೆಂದು ತಿಳಿಯುವ ಕಾರಣಕ್ಕಲ್ಲ ಬದಲು ನಿಜವನ್ನು ಮನಸ್ಸಿಗೆ ತರುತ್ತದೆ ಎಂಬ ಕಾರಣದಿಂದಷ್ಟೇ ಎಂಬ ಮಾನವೀಯ ನೆಲೆಯನ್ನು ಸ್ಪಷ್ಟ ಪಡಿಸಿದ್ದಾರೆ.
ಮಾಧುರಿ ಕೃಷ್ಣ
***
ಬಿಡಿಸಿದ ಚಿತ್ರಗಳನ್ನೇ ಮತ್ತೆ ಮತ್ತೆ ಬಿಡಿಸಿದರೂ ಕಾಲಮಾನಕ್ಕೆ ತಕ್ಕಂತೆ ಅದರ ಅರ್ಥವೂ ಬದಲಾಗುತ್ತಾ ಹೋಗುತ್ತದೆ. ಕೆಲವೊಮ್ಮೆ ಬೇರೆಯವರು ನಮ್ಮ ಕ್ಯಾನ್ವಾಸಿನ ಮೇಲೆ ಅವರ ಚಿತ್ರ ಬರೆಯುವ ಅವಕಾಶವೂ ಇರುತ್ತದೆ. ಎಷ್ಟು ಬರೆದು ಅಳಿಸಿದರೂ ಕ್ಯಾನ್ವಾಸ್ ಹಾಳಾಗುವುದಿಲ್ಲ. ಆದರೆ ಹೊಸ ಚಿತ್ರ ಬರೆಯುವಾಗ ಅವಕಾಶಕ್ಕಾಗಿ ಹಳೆಯದನ್ನು ಅಳಿಸಲೇಬೇಕು. ಹಾಗೆ ಅಳಿಸುವಾಗ ಅಲ್ಲೊಂದು ಗೆರೆ, ಇಲ್ಲೊಂದು ಬಣ್ಣದ ಕಲೆ ಉಳಿಸಿ ಹೋಗುತ್ತದೆ. ಅದು ಒಳ್ಳೆಯದಾದರೆ ಸವಿನೆನಪು. ಇಲ್ಲಾಂದರೆ ಮುಗಿಯದ ಕೊರಗು. ‘ತೆರೆಮರೆಯ ಅಂತರಂಗ’ ಎಂಬ ಆಕರ್ಷಕ ಟ್ಯಾಗ್ ಲೈನ್ ನೊಂದಿಗೆ ಆಶಾ ರಘು ಅವರು ಗತಿಸಿದ ಕಾಲದ ಸುಂದರ ಕಥಾನಕವನ್ನು ‘ಚಿತ್ತರಂಗ’ ಕಾದಂಬರಿಯಲ್ಲಿ ಪ್ರಸ್ತುತಪಡಿಸಿದ್ದಾರೆ.
ಮಹೇಶ ಅರಬಳ್ಳಿ
***
ಚಿತ್ರರಂಗವಾಗಲಿ ಅಂದಿನ ವೃತ್ತಿರಂಗಭೂಮಿಯಾಗಲಿ ಪುರುಷ ಪ್ರಧಾನ ಕ್ಷೇತ್ರಗಳು ಅನ್ನುವ ಸತ್ಯವನ್ನು ಕಾದಂಬರಿ ಮತ್ತೆ ಮತ್ತೆ ನೆನಪಿಸುತ್ತದೆ. ಹೆಣ್ಣು ಎಷ್ಟೇ ಪ್ರತಿಭಾವಂತಳಾದರೂ ಆಕೆಗೆ ಅಲ್ಲಿ ಸಿಗುವುದು ಎರಡನೇ ಸ್ಥಾನ. ಹೆಣ್ಣಿನ ಶೋಷಣೆ ಇಲ್ಲಿ ಅಲ್ಲಲ್ಲಿ ಕಾಣುತ್ತದೆ. ಕಲಾವಿದೆಯಾಗಬೇಕೆಂಬ ಮಹದಾಸೆ ಇಟ್ಟುಕೊಂಡು ಬರುವ ಹೆಣ್ಣುಮಕ್ಕಳನ್ನು ಸಮಾಜ ನಿಕೃಷ್ಟವಾಗಿ ಕಾಣುತ್ತದೆ ಮತ್ತು ಕ್ಷೇತ್ರದ ಒಳಗಿನವರು ಅವರನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುತ್ತಾರೆ. ಅವರು ನಿರ್ಮಾಪಣ ನಿರ್ದೇಶನದಂತಹ ಜವಾಬ್ದಾರಿಗಳನ್ನು ತೆಗೆದುಕೊಳ್ಳ ಬಯಸಿದರೆ ಅವರನ್ನು ಕೈಲಾಗದವರು, ವ್ಯವಹಾರ ಜ್ಞಾನವಿಲ್ಲದವರು ಎಂಬಂತೆ ನೋಡುತ್ತದೆ. ಈ ಎಲ್ಲ ಹುಳುಕುಗಳ ಮೇಲೆ ಲೇಖಕಿ ಬೆಳಕು ಚೆಲ್ಲಿದ್ದು ಕಾದಂಬರಿಯ ಧನಾತ್ಮಕ ಅಂಶ.
ಪಾರ್ವತಿ ಜಿ.ಐತಾಳ್
***
ಚಿತ್ತರಂಗ ಕಾದಂಬರಿ ಓದಿದೆ. ಸಿನಿಮಾ ಇಷ್ಟು ಚೆನ್ನಾಗಿ ಮೂಡಿ ಬರುತ್ತೋ ಇಲ್ವೋ ಅನುಮಾನ. ಓದ್ತಾ ಇರುವಾಗಲೇ ಸಿನಿಮಾ ನೋಡಿದ ಅನುಭವ ಉಂಟಾಯಿತು.
ಪ್ರಭಾಕರ ಜೋಶಿ, ನಿರ್ದೇಶಕ, ರಂಗಾಯಣ,ಕಲಬುರಗಿ
***
ಕಾದಂಬರಿಕಾರರು ತಮ್ಮೀ ಕೃತಿಯಲ್ಲಿ, ತೆರೆಯ ಮೇಲೆ ಹಾಡಿ ಕುಣಿದು ನಲಿದು ನಮಗೆ ಆರಾಧ್ಯರೆನಿಸುವ ತಾರೆಯರ ನಿಜಬದುಕು ಹೇಗಿರುತ್ತದೆ ಎಂದು ತನ್ಮಯತೆಯಿಂದ ದಾಖಲಿಸಿದ್ದಾರೆ. ಅವರ ಅನುಭವ, ಚಿತ್ರಣ ನಿಜಕ್ಕೂ ಸೊಗಸಾಗಿದೆ. ಮಾತಾಡುವಲ್ಲೇ ಸೋಲುವ ನಾವು ಬರೆಯುವಲ್ಲಿ ಗೆದ್ದವರು ನಮ್ಮೆದುರಿರುವಾಗ ಅದನ್ನು ಕಲೆಗಾರಿಕೆ ಎಂದು ಗುರುತಿಸಿ ಗೌರವಿಸಲೇ ಬೇಕು.
ಡಾ.ಪ್ರದೀಪ್ ಕುಮಾರ್ ಹೆಬ್ರಿ
***
ಚಲನಚಿತ್ರದಲ್ಲಿ ಬಳಸುವ ಪ್ರಮುಖ ಫ್ಲಾಶ್ ಬ್ಯಾಕ್ ತಂತ್ರವನ್ನೇ ಇಲ್ಲಿ ಬಳಸಿಕೊಂಡು, ಪತ್ರಕರ್ತನೊಬ್ಬ ನಡೆಸುವ ಸಂದರ್ಶನದ ರೂಪ ನೀಡಿ ಸುಬ್ಬಣ್ಣನ ಬದುಕನ್ನು ಬಾಲ್ಯದಿಂದ ನಿರ್ದೇಶನದವರೆಗೂ ಹರಿಯಬಿಡುತ್ತಾರೆ. ಸುಬ್ಬಣ್ಣನ ಬದುಕಿನ ವಿವರಣೆ ಸಿನಿಮಾ ಶೈಲಿ ಪಡೆದುಕೊಳ್ಳದೆ ವಾಸ್ತವವೇ ಎನಿಸಿಬಿಡುವಷ್ಟು ಲೇಖನಿ ಹೊರಳಿದೆ. ಅಹಲ್ಯ ಎಂಬ ನಟಿಯೊಂದಿಗಿನ ಸಂಬಂಧ, ಪ್ರಭಾ ನೆನಪು, ಕಸ್ತೂರಿಯ ಬಣ್ಣದ ಲೋಕದ ಏಳುಬೀಳು ಬಿಡಿಸುತ್ತಾ, ಸಿನಿಮಾ ಶೈಲಿಯಲ್ಲೇ ನಿರೂಪಣೆ ಮಾಡುತ್ತಾ ಹೋಗುತ್ತಾರೆ ಲೇಖಕಿ. ರಾಜೇಶ್ವರಿಯ ಪಾತ್ರಪೋಷಣೆ ಉಲ್ಲೇಖಾರ್ಹ, ಹೀಗಾಗಿಯೇ ಕಥೆಗೆ ವೇಗವಿದೆ. ಕಥೆಯೊಳಗೊಂದು ಕಥೆ ಹೆಣೆಯುವ ಆಶಾ ಅವರ ಕೈಚಳಕವೂ ಇಲ್ಲಿ ಕಾಣಬಹುದು. ಬರವಣಿಗೆಯ ಶೈಲಿ ಓದಿನ ಓಘಕ್ಕೆ ಪೂರಕ, ಸಿನಿಮಾದ ತಾಂತ್ರಿಕ ಅಂಶಗಳನ್ನು ಕೃತಿಯ ಹಲವು ಕಡೆ ಕಾಣಬಹುದಾಗಿದೆ.
ಪ್ರಜಾವಾಣಿ
***
ಇಲ್ಲಿ ಲೇಖಕಿ ಆಶಾ ರಘು ಅವರು ತಮ್ಮ ಹರಿತವಾದ ಲೇಖನಿಯಿಂದ ಕಾದಂಬರಿಯಲ್ಲಿ ಬರುವ ಪ್ರತಿಯೊಂದು ಪಾತ್ರಗಳನ್ನು ಅತ್ಯಂತ ವಿಭಿನ್ನವಾಗಿ.. ಸುಂದರವಾದ ಜೇಡರ ಬಲೆಯಂತೆ ಕತೆ ಹೆಣೆದಿದ್ದಾರೆ. ಚಿತ್ತರಂಗ ಒಂದು ಅದ್ಭುತ ಕಾದಂಬರಿ ಎನ್ನುವುದಕ್ಕೆ ಎರೆಡು ಮಾತಿಲ್ಲ. ಓದುಗರ ಮನಸನ್ನು ಸೆರೆಹಿಡಿದುಕೊಳ್ಳುವ ಶಕ್ತಿ ಇದೆ.
ರೇಣುಕಾ ಶಿವಕುಮಾರ
***
ಸುಬ್ಬಣ್ಣನ ಬದುಕಿನ ಯಾನವನ್ನು ಆಶಾ ರಘು ಅವರು ತುಂಬಾ ಕಲಾತ್ಮಕವಾಗಿ ಕಡೆದಿರಿಸಿದ್ದಾರೆ. ಎಲ್ಲಿಯೂ ಇದು ಅವಾಸ್ತವ ಎನಿಸದ, ಬಡತನದಲ್ಲಿ ಅರಳಿದ ಪ್ರತಿಭೆಯೊಂದು ಎದುರಿಸಬೇಕಾದ ಸವಾಲುಗಳನ್ನು ಮನಮುಟ್ಟುವಂತೆ ವಿವರಿಸುವಲ್ಲಿ ಕಲ್ಪನೆಗೆ ಎಡೆಗೊಟ್ಟಿಲ್ಲವೆಂಬ ಭಾವ ಆವರಿಸುತ್ತದೆ. ಓದುಗರಲ್ಲಿ ಇಂತಹ ನಂಬುಗೆಯ ಭಾವನೆಗಳನ್ನು ಸೃಜಿಸುವುದೇ ಕಾದಂಬರಿಕಾರರ ಮೊದಲ ಯಶಸ್ಸು.
ಡಾ.ಎಚ್.ಎಸ್. ಸತ್ಯನಾರಾಯಣ
***
ನೈಜ ವ್ಯಕ್ತಿ, ಘಟನೆಯನ್ನ ಆಧರಿಸಿ ಕಥೆ ಕಟ್ಟುವ ಕೆಲಸವು ತನ್ನಷ್ಟಕ್ಕೆ ಧನಾತ್ಮಕವೂ ಅಲ್ಲ, ಋಣಾತ್ಮಕವೂ ಅಲ್ಲ. ಆ ಆವರಣದಲ್ಲಿ ನಡೆದ ಒಂದಿಷ್ಟು ಘಟನೆಗಳ ವರದಿಯಾಗಿಬಿಡಬಹುದಾದಂತಹ ಭಯದಿಂದ ಪಾರಾಗಲೇ ಬೇಕಾದ ಸವಾಲು ಲೇಖಕನಿಗೆ ಇರುತ್ತದೆ. ಒಂದು ರೋಚಕ ವರದಿ ಅಥವಾ ನಿರೂಪಣೆಯ ಹಂತದಿಂದ ಮೇಲೆ ಏರಿ ಒಂದು ಕಲಾಕೃತಿಯಾಗಿ ಅದು ಓದುಗನನ್ನು ಮುಟ್ಟಿದಾಗ ಮಾತ್ರ ಕೃತಿ ಸಾರ್ಥಕವಾಗುತ್ತದೆ. ಆದರೆ ಬಹಳಷ್ಟು ಇಂತಹ ಕೃತಿಗಳು ಓದುವಾಗ ನೀಡಿದ ರೋಚಕತೆಗಿಂತ ಮೇಲ್ಮಟ್ಟದ ಸಾಂದ್ರ ಅನುಭವನ್ನ ಕಟ್ಟಿಕೊಡುವಲ್ಲಿ ಅವು ತುಂಬಾ ಯಶಸ್ವಿಯಾಗಿಲ್ಲ ಎನ್ನುವುದು ನನ್ನ ನಮ್ರ ತಿಳುವಳಿಕೆ. ಸೊಗಸಾಗಿ, ಸ್ವಾರಸ್ಯಕರವಾಗಿ, ಒಮ್ಮೊಮ್ಮೆ ತಳ್ಳಣಗೊಳಿಸುತ್ತಾ, ರೋಚಕವಾಗಿ ಕಥೆ ಹೇಳೋದು ಬೇರೆ; ಹಾಗೆ ಕಥೆ ಹೇಳುತ್ತಲೇ ನಿಮ್ಮ ಹೃದಯದ ಕದ ಬಡಿಯುತ್ತಾ ಭಾವ ತಂತಿಗಳನ್ನ ಮೀಟೋದು ಬೇರೆ! ಇಲ್ಲಿ ಆಶಾ ರಘು ಅವರು ಪ್ರಚಂಡವಾದ ಯಶಸ್ಸನ್ನು ಗಳಿಸಿದ್ದಾರೆ. ಇದು ನಿರ್ವಿವಾದವಾದಂತಹ ಸಂಗತಿ.
ಶ್ರೀನಿವಾಸ ಪ್ರಭು
***
ಇದು ನಮ್ಮ ಚಿತ್ರರಂಗದ ಚಿತ್ತರಂಗಕ್ಕೆ ಕನ್ನಡಿ ಹಿಡಿದ ಹಾಗಿದೆ. ಕನ್ನಡದಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಬಂದ ಕಾದಂಬರಿಗಳು ತುಂಬಾ ಕಡಿಮೆ. ಅಂತಹ ವಿರಳ ಕೃತಿಗಳಲ್ಲಿ ನಿಮ್ಮ ಈ ಕಾದಂಬರಿಯು ಪ್ರಮುಖವಾದುದು ಎಂಬುದು ಖಚಿತ. ಜತೆಗೇ ನಿಮ್ಮ ಬರೆವಣಿಗೆಯ ನಿರಂತರತೆ ಹಾಗೂ ವಿಪುಲತೆಗೆ ನಾನು ಬೆರಗಾಗಿದ್ದೇನೆ.
ಸುಬ್ರಾಯ ಚೊಕ್ಕಾಡಿ
***
ಅತೀ ಸರಳ ಮತ್ತು ಕುತೂಹಲಕರ ರೀತಿಯಲ್ಲಿ ಲೇಖಕಿ ಕಥೆ ಹೇಳಿದ್ದಾರೆ. ಇಲ್ಲಿ ಮುಖ್ಯ ಪಾತ್ರಗಳಾದ ಸುಬ್ಬಣ್ಣ, ಕಸ್ತೂರಿ, ಅಹಲ್ಯಾ , ರಾಜೇಶ್ವರಿ ತಮ್ಮ ಕಥೆ ಹೇಳುತ್ತವೆ. ತಮ್ಮ ಬದುಕಿನಲ್ಲಿ ನಡೆದ ಏರು ಪೇರಿನ ಕುರಿತು ಹಂಚಿಕೊಳ್ಳುತ್ತವೆ. ರೀಲ್ ಲೈಫ್ ಮತ್ತು ರಿಯಲ್ ಲೈಫ್ ನಡುವೆ ಸಮನ್ವಯ ಸಾಧಿಸಲು ಆಗದ ನಟ ನಟಿಯರ ಬದುಕು ಕೊನೆಗೆ ದುರಂತ ಎನ್ನುವುದೇ ಈ ಪುಸ್ತಕದ ಜೀವಾಳ.
ಸುಜೀತ್ ಕಾಮತ್
***
ಪಾತ್ರಗಳ ಅಂತರಂಗವನ್ನು ತೆರೆಮರೆಯಿಂದ ಹೊರಕ್ಕೆ ಕಾಣಿಸಿದ ಪರಿ ಇಷ್ಟವಾಯಿತು. ಈ ಕಾದಂಬರಿಯಲ್ಲಿ ಬರುವ ನಿರ್ದೇಶಕರು ಹಾಗೂ ನಾಯಕಿಯರ ಕುರಿತು ಇಂತಹವರೇ ಎಂದು ಗೊತ್ತಿದ್ದರೂ.. ಅವರ ಜೀವನದ ಕಥೆ ಗೊತ್ತಿದ್ದರೂ.. ಮತ್ತೆ ಹೊಸ ಹೊಸ ಆಯಾಮಗಳಿಂದ ಕಥೆಯನ್ನು ಕಟ್ಟಿಕೊಟ್ಟಿರುವ ಕಾದಂಬರಿ ಕುತೂಹಲಕರವಾಗಿ, ಪುಸ್ತಕವನ್ನು ಕೆಳಗಿಡದಂತೆ ಓದಿಸಿಕೊಂಡು ಹೋಗುವಂತಿದೆ. ಮುಖಪುಟವೂ ಆಕರ್ಷಕವಾಗಿ, ಅರ್ಥಪೂರ್ಣವಾಗಿದೆ.
ವಿಭಾ ವಿಶ್ವನಾಥ್
***
ಖ್ಯಾತ ಕಾದಂಬರಿಕಾರಾದ ಆಶಾ ರಘು ಅವರ ನೂತನ ಕಾದಂಬರಿ ‘ಚಿತ್ತರಂಗ’ ಚಿತ್ರರಂಗದ ಚಿತ್ತರಂಗವನ್ನು ಅನಾವರಣಗೊಳಿಸುವ ಅದ್ಭುತ ಕೃತಿ. ಸಿನೆಮಾ ನಿರ್ಮಾಣ ಎಂಬುದು ಬಹು ದೊಡ್ಡ ಆರ್ಥಿಕ ವಾಣಿಜ್ಯ ವ್ಯವಹಾರವಿದ್ದಂತೆ ಅದು ಕಲೆಯಾಗಿಯೂ, ಜನರ ಮನಸ್ಸನ್ನು ಮೂರು ತಾಸುಗಳ ಕಾಲ ರಂಜಿಸುತ್ತದೆ. ಚಿತ್ರರಂಗವು ನಟರು, ನಿರ್ದೇಶಕರು, ನಿರ್ಮಾಪಕರು, ಕ್ಯಾಮರಾಮೆನ್, ಶೂಟಿಂಗ್ ಇವೆಲ್ಲವನ್ನೂ ಒಳಗೊಂಡ ಒಂದು ಬೃಹತ್ ಉದ್ದಿಮೆ. ಈ ಸಿನೆಮಾ ನಿರ್ಮಾಣದಲ್ಲಿ ನಿರ್ದೇಶಕನ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ. ಸಿನೆಮಾದ ಯಶಸ್ಸು ನುರಿತ ದಕ್ಷ ನಿರ್ದೇಶಕನ ಮೇಲೆ ಅವಲಂಬಿಸಿರುತ್ತದೆ. ಅಂತಹ ಒಬ್ಬ ಖ್ಯಾತ ನಿರ್ದೇಶಕನ ವೃತ್ತಿ , ಪ್ರವೃತ್ತಿ ಅವನ ಖಾಸಗಿ ಬದುಕಿನ ಆಂತರ್ಯವನ್ನು ಕಾದಂಬರಿಕಾರರು ತುಂಬ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.
ಉದಯಕುಮಾರ ಹಬ್ಬು
***