
ಅಧ್ಯಯನದ ಅರಿವನ್ನು ಅಂತರಂಗದ ಸಂವೇದನೆಯಾಗಿಸಿಕೊಳ್ಳುವುದು ಸುಲಭದ ಪ್ರಕ್ರಿಯೆಯಲ್ಲ. ಇದು ಚಿಂತನಶೀಲತೆ ಮತ್ತು ಸಂವೇದನಾಶೀಲತೆಗಳನ್ನು ಒಂದಾಗಿಸುವ ಸವಾಲು. ಈ ಸವಾಲನ್ನು ಸ್ವೀಕರಿಸಿರುವ ಲೇಖಕಿ, ವಾಸ್ತವಿಕತೆ ಮತ್ತು ಕಲ್ಪಕತೆಗಳೊಂದಾದ ಕಾದಂಬರಿಯನ್ನು ಆಡುಭಾಷೆಯಲ್ಲಿ ನಿರೂಪಿಸಿ ಭಾಷಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮುಖ್ಯವಾಗಿಸಿದ್ದಾರೆ. ವಸ್ತು ಮತ್ತು ವಿನ್ಯಾಸದ ದೃಷ್ಟಿಯಿಂದ ಕನ್ನಡಕ್ಕೆ ಚಿಂತನಾರ್ಹ ಕೃತಿಯೊಂದನ್ನು ಕೊಟ್ಟಿದ್ದಾರೆ.
ಡಾ. ಬರಗೂರು ರಾಮಚಂದ್ರಪ್ಪ
***
ಈ ಕೃತಿಯಲ್ಲಿ ವಸ್ತುವಿನಷ್ಟೇ ಮಹತ್ವ ಅದರ ಭಾಷೆಗೂ ಪ್ರಾಪ್ತವಾಗಿದೆ. ಗತ ಮತ್ತು ಪ್ರಸ್ತುತಗಳನ್ನು ಲೋಲಕದ ಮಾದರಿಯಲ್ಲಿ ಸ್ಪರ್ಶಿಸುತ್ತ ಸಾಗುವ ಇದರ ನಿರೂಪಣಾ ಕ್ರಮವು ಕೆಲವೆಡೆ ಮೇಲ್ನೋಟಕ್ಕೆ ಏಕರೇಖಾತ್ಮಕವೆನ್ನಿಸಿದರೂ, ಅಗತ್ಯಕ್ಕನುಗುಣವಾಗಿ ಅಲ್ಲಲ್ಲಿ ತಂತು ಮಾದರಿ ನಿರೂಪಣೆಯನ್ನೂ ಬಳಸಿಕೊಂಡಿದೆ. ನಡಿಗೆಯ ಈ ವಿಧಾನವು ಅಲ್ಲಲ್ಲಿ ವಡ್ಡಾರಾಧನೆಯ ಜನ್ಮಾಂತರದ ಕಥೆಗಳನ್ನು ನೆನಪಿಸುತ್ತದೆ.
ಡಾ. ಚಿದಾನಂದ ಸಾಲಿ
***
ಜಾನಪದ ಕಥೆಗಳಿಂದ ಸ್ಪೂರ್ತಿ ಪಡೆದು ಹುಟ್ಟಿದ ಈ ಮಾರ್ಕೋಲು ಕುತೂಹಲಭರಿತವಾಗಿ ಓದಿಸಿಕೊಂಡು ಹೋಗುವ ಕೃತಿ. ಅನೇಕ ಅಲೌಕಿಕ ಘಟನೆಗಳ ಕುರಿತು ಅಧ್ಯಯನ ನಡೆಸಿದ ಆಶಾ ರಘು ಶೃದ್ಧೆಯಿಂದ ಹೆಣೆದು ಈ ಕೃತಿಯನ್ನು ಕಟ್ಟಿದ್ದಾರೆ. ಮನುಷ್ಯನ ಪ್ರಯತ್ನದಿಂದ ಯುಕ್ತಿಯಿಂದ ಹಣೇಬರವನ್ನೂ ಮೀರಬಹುದು ಎನ್ನುವ ದ್ಯಾಮವ್ವಳ ಮಾತು ಇಲ್ಲಿ ಹೆಚ್ಚು ಪ್ರಸ್ತುತ.
ಶ್ರೀಮತಿ ಸುನಂದಾ ಕಡಮೆ
***
ಅನೇಕ ಕಥೆ-ಉಪಕಥೆಗಳು, ಸ್ವಾರಸ್ಯಕರ ಪಾತ್ರಗಳು-ಸನ್ನಿವೇಶಗಳು ಕಾದಂಬರಿಯ ಹೂರಣದಲ್ಲಿ ಅಡಕಗೊಂಡಿವೆ. ಒಂದು ಓದಿಗೆ ದಕ್ಕದಷ್ಟು ವಿವರಗಳು ದಟ್ಟವಾಗಿ ಕೃತಿಯ ಹರಹಿನಲ್ಲಿ ತುಂಬಿಕೊಂಡಿವೆ. ಕೃತಿಯನ್ನು ಕಟ್ಟಿಕೊಟ್ಟಿರುವ ಕುಶಲತೆಗೆ, ಸೂಕ್ಷ್ಮ ಸಂವೇದನಾಶೀಲ ಕಥಾಭಿತ್ತಿಯೊಂದನ್ನು ಸಮರ್ಥವಾಗಿ ಕಡೆದು ಕೊಟ್ಟಿರುವ ಜಾಣ್ಮೆಗೆ, ಭಾಷಾ-ವಸ್ತುಗಳ ವೈವಿಧ್ಯತೆ ಹಾಗೂ ಪ್ರಯೋಗಶೀಲತೆಗಳಿಗೆ, ಖಚಿತ-ಆರೋಗ್ಯಕರ ನಿಲುವುಗಳಿಗೆ ಲೇಖಕಿ ಆಶಾ ರಘು ಅವರನ್ನು ಮನಸಾರೆ ಅಭಿನಂದಿಸುತ್ತೇನೆ.
ಶ್ರೀ ಶ್ರೀನಿವಾಸ ಪ್ರಭು
***
ಇದೊಂದು ಜಾನಪದ ನಂಬಿಕೆಗಳನ್ನು ಒಳಗೊಂಡ ಕಾದಂಬರಿ. ಗ್ರಾಮೀಣ ಭಾಷೆಯಲ್ಲಿರುವ ಈ ಕಥನದಲ್ಲಿ ಹಲವಾರು ನಂಬುವ, ನಂಬಿಕೆಯನ್ನು ಮುರಿಯುವ, ಮುರಿದು ಕಟ್ಟುವ ಪ್ರಯತ್ನಗಳಿವೆ. ಮೇಲ್ನೋಟಕ್ಕೆ ಇದು Oedipus ನ ಕಥೆಯ ಮಾದರಿ ಅನ್ನಿಸುತ್ತದೆ. ಆದರೆ ಅದನ್ನು ಮೀರಿ ಈ ನೆಲದ ಸಾಂಸ್ಕೃತಿಕ ಪ್ರಜ್ಞೆಯನ್ನು ಸೆರೆಹಿಡಿಯುವುವಲ್ಲಿ ಈ ಕಾದಂಬರಿ ಗೆದ್ದಿದೆ. ಹಲವಾರು ಉಪಕಥೆಗಳು ಈ ಕಥನದಲ್ಲಿ ಒಳಗೊಂಡಿದ್ದು ಮೂಲ ಕಥೆಯನ್ನು ಅರ್ಥಪೂರ್ಣಗೊಳಿಸಿವೆ. ಈ ಕಥಾವಸ್ತು ವಿಚಿತ್ರವಾಗಿದೆ, ವೈಜ್ಞಾನಿಕ ದೃಷ್ಟಿಯಿಂದ ಅಷ್ಟೊಂದು ಸರಿ ಕಾಣುತ್ತಿಲ್ಲ ಎನ್ನುತ್ತಾ ಅರ್ಧ ಪುಸ್ತಕ ಓದಿದೆ. ಇನ್ನರ್ಧ ಓದಿದಾಗ “ಮಾರ್ಕೋಲು”ವಿನ ಪರಿಣಾಮ ತಿಳಿಸಲು ಮೊದಲ ಭಾಗದ ವಿಶ್ಲೇಷಣೆ ಅವಶ್ಯಕವೆನ್ನಿಸಿತು.
ಮಹೇಶ ಅರಬಳ್ಳಿ