
ಈ ಕೃತಿಯಲ್ಲಿ ಒಟ್ಟು 160 ಪುಟ್ಟ ಪುಟ್ಟ ಕತೆಗಳಿವೆ. ಬೊಗಸೆಯಲ್ಲಿ ಹಿಡಿಯಬಹುದಾದರೂ ಎಷ್ಟು? ಹಾಗೆಯೇ ಇಲ್ಲಿರುವ ಎಲ್ಲ ಕತೆಗಳೂ ಬೊಗಸೆಯಷ್ಟೇ ಇವೆ. ಎಲ್ಲವೂ ಕುತೂಹಲ ಮೂಡಿಸುವಂಥ, ಆಸಕ್ತಿ ಕೆರಳಿಸುವಂಥ ಕತೆಗಳು. ಈ ಗುಚ್ಛದಲ್ಲಿ ಥ್ರಿಲ್ಲರ್ ಕಥೆಗಳು ಸಾಕಷ್ಟು ಜಾಗ ಪಡೆದುಕೊಂಡಿವೆ.
ಉದಯವಾಣಿ
***
ಕಥೆಗಾರಿಕೆಯಲ್ಲಿ ಹೆಚ್ಚು ಹೆಚ್ಚು ಜನರಿಗೆ ತಲುಪಿಸುವುದಕ್ಕಾಗಿ ಹೊಸ ಮಾದರಿಯ ಹೊಳವುಗಳನ್ನು ಕಂಡುಕೊಳ್ಳುವುದು ಪದೇ ಪದೇ ಅಗತ್ಯವಾಗುತ್ತದೆ. ಯಾಕೆಂದರೆ ಅಂತಹ ರಂಗವನ್ನು ಒಳ್ಳೆಯ ಕಥೆಗಳು ಸ್ಪರ್ಷಿಸಿದಷ್ಟು ಬೇರೆ ಯಾವ ಸಂಗತಿಗಳು ಸ್ಪರ್ಷಿಸುವುದಿಲ್ಲ- ಉತ್ತಮ ವಸ್ತುವುಳ್ಳ ಕಥೆಗಳಿಗೆ ಜಾಗತಿಕ ನೆಲೆಯಿದೆ. ಹಳೆ ಪೀಳಿಗೆಯವರನ್ನು ಹಿಡಿದಿಟ್ಟುಕೊಳ್ಳಲು ಹೊಸ ಪರಿಧಿಗೆ ಜಾರುವ ಯುವ ಪೀಳಿಗೆಯವರನ್ನು ಆಕರ್ಷಿಸಲು ಆಗಾಗ ನವೀನ ಪ್ರಕಾರದ ಅಭಿವ್ಯಕ್ತಿಯ ವಿಸ್ತರಣೆ ಬೇಕಾಗುತ್ತದೆ. ಯಾವುದೂ ಒಮ್ಮಿಂದೊಮ್ಮೆಲೇ ಉದ್ಭವಿಸಿ ಬರುವುದಿಲ್ಲ – ನಿರಂತರ ಓದು, ಚಿಂತನೆ, ಚರ್ಚೆ ವಿಶ್ಲೇಷಣೆಗಳ ಫಲದಿಂದ ಮೂಡಿ ಬರುತ್ತದೆ. ಇಂತಹ ಪ್ರಯೋಗಾತ್ಮಕ ದಾರಿಯಲ್ಲಿ ಚಿತ್ತವಿಟ್ಟು ನಡೆದಾಗ ಹೊಸ ಹೊಸ ಕಲ್ಪನೆಗಳು ಗರಿಗೆದರಿ ಅವತರಿಸುತ್ತದೆ. ಪ್ರಸ್ತುತ ಲೇಖಕಿ ಆಶಾ ರಘು ಅವರು ತಮ್ಮ ಬೊಗಸೆ ತುಂಬಾ ವೈವಿಧ್ಯಮಯ 160 ಸಣ್ಣಕಥೆಗಳ ಬಿಡಿ ಬಿಡಿ ಪುಷ್ಪಾರ್ಪಣೆಯ ಓದನ್ನು ನೀಡಿದ್ದಾರೆ. ಕಥೆ ಎರಡೇ ಎರಡು ಸಾಲಿನಲ್ಲೂ ಇವೆ. ಹನ್ನೆರಡು ಸಾಲಿನಲ್ಲೂ ಕಟ್ಟಿಕೊಂಡಿವೆ. ಓದುಗನನ್ನು ಗಾಢವಾಗಿ ಮುಟ್ಟುತ್ತ ತಟ್ಟುತ್ತ ಕಲ್ಪಿತ ಕಥನಗಳಿಗೂ ನಿಜ ದರ್ಶನದ ಅನುಭೂತಿಯನ್ನುಂಟುಮಾಡುತ್ತವೆ.
ಶ್ರೀಮತಿ ಮಾಧುರಿ ಕೃಷ್ಣ