ಪೂತನಿ ಮತ್ತಿತರ ನಾಟಕಗಳು ಪ್ರತಿಕ್ರಿಯೆ /Feedback


ಪೂತನಿ, ಹೆಸರು ಕೇಳಿದರೇ ನಮ್ಮ ಉಸಿರು ವಿಷಗಟ್ಟುತ್ತದೆಯೇನೋ ಎಂಬ ಹೇವರಿಕೆಯ, ಕ್ರೋಧದ, ಋಣಾತ್ಮಕ ಭಾವನೆಗಳೇ ಜಾಗೃತವಾಗುವ ಹಿನ್ನೆಲೆ. ಆದರೆ ಆಶಾ ರಘು ಕಡೆದಿರುವ ಪೂತನಿ ಎಂಬ ವಿಗ್ರಹ, ಮನಃಶಾಸ್ತ್ರದ ನೆಲೆಗಟ್ಟಿನಿಂದ ರೂಪುಗೊಂಡಿರುವುದು. ಹೀಗಾಗಿ, ಪೂತನಿಯ ಹಾವ-ಭಾವ, ನಡೆನುಡಿ, ಮಾತುಕತೆಗಳಿಂದ ಹಿಡಿದು ಆಕೆಯ ಪ್ರತಿ ನಿಲುವು ನಮಗೆ ಸಮರ್ಥನೀಯ ಎನಿಸತೊಡಗುತ್ತದೆ.ಮನುಷ್ಯನನ್ನು ಕಪ್ಪು- ಬಿಳುಪು ಎಂಬ ಎರಡೇ ಗುಣಾವಗುಣಗಳ ತಕ್ಕಡಿಯಲ್ಲಿ ಹಾಕುವ ಸ್ಥಾಪಿತ ಮನೋಸ್ಥಿತಿಯನ್ನು ನಾಟಕ ಪ್ರಧಾನವಾಗಿ ಪ್ರಶ್ನಿಸುತ್ತದೆ. ನಾಟಕದ ಸಂಭಾಷಣೆಗಳು ಸಶಕ್ತವಾಗಿದ್ದು, ಸುಭಗ ಶೈಲಿಯಿಂದ ನಾಟಕದ ಓಟ, ಕಥಾ ಹಂದರಕ್ಕೆ ಸಹಜವಾಗಿ ಬೆಸೆದುಗೊಂಡಿದೆ. ಹೆಣ್ಣು, ಅವಳದೇ ಮನೋಭೂಮಿಕೆಯಲ್ಲಿ ನೀಚತನವೇ ಮೈವೆತ್ತಂತೆ ತೋರುವ ಪಾತ್ರದ ಅಂತರಂಗಕ್ಕೆ ಆಶಾ ರಘು ಅವರು ಪಾತಾಳಗರಡಿ ಇಳಿಸಿ ಹೊರತಂದಿರುವ ವಿಶ್ಲೇಷಣೆ, ಮಾನವೀಯತೆಯಿಂದ ತುಡಿಯುವ ಪರಿಷ್ಕೃತ ಮನಸ್ಥಿತಿಯಿಂದ ಮಾತ್ರ ಸಾಧ್ಯ.
ಆರತಿ ಎಚ್. ಎನ್
***

ಅವರಿಗೆ ಸಾಹಿತ್ಯಕೃತಿಯೂ ಗೊತ್ತೂ, ಹಾಗೆಯೇ ರಂಗಕೃತಿಯೂ ಗೊತ್ತು. ರಂಗ ಸಾಹಿತ್ಯದ ಜೊತೆ ಜೊತೆಗೆ ರಂಗಭಾಷೆಯನ್ನು ಬಲ್ಲವರು. ಅವರ ಅಷ್ಟೂ ನಾಟಕಗಳೂ ರಂಗಪರಿಭಾಷೆಯ ಮೂಲಕವೇ ಅಭಿವ್ಯಕ್ತಿಗೊಳ್ಳುವಂತಹುವು. ಇವರಿಗೆ ರಂಗಭೂಮಿ ಗೊತ್ತಿರುವುದರಿಂದಲೇ ಇಲ್ಲಿಯ ನಾಟಕಗಳೆಲ್ಲವೂ ನೇರವಾಗಿ ರಂಗದಲ್ಲಿ ಪ್ರದರ್ಶಿಸಲು ಪೂರಕವಾಗಿವೆ. ಆಶಾ ರಘು ಅವರು ಕಾದಂಬರಿಗಾರ್ತಿಯಾಗಿ ಹೇಗೆ ಉನ್ನತ ಹೆಸರು ಮಾಡಿದ್ದಾರೆಯೋ.. ಅವರ ಕಾದಂಬರಿಗಳು ಹೇಗೆ ಸಾರಸ್ವತ ಲೋಕದಲ್ಲಿ ಬಹುಚರ್ಚೆಗೆ ಒಳಗಾಗಿದ್ದಾವೋ ಹಾಗೆಯೇ ಇವರ ಈ ನಾಟಕಗಳು ರಂಗವೇರಿ ಸಹೃದಯ ಪ್ರೇಕ್ಷಕರ ಮನ ಗೆಲ್ಲಲಿ.
ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮಹಾಮನೆ
***
ಪಟಾಚಾರ ಕೂಡ ತನ್ನ ತಂತ್ರಗಾರಿಕೆಯಿಂದ ಗಮನ ಸೆಳೆಯುವ ಇನ್ನೊಂದು ಮುಖ್ಯ ನಾಟಕ. ಮೊಟ್ಟ ಮೊದಲು ಭಿಕ್ಕುಣಿಯಾದ ಪಟಾಚಾರ ತ್ರಿಪಿಟ್ಟಕಗಳನ್ನು ಬೋಧಿಸುತ್ತ ಬೌದ್ಧ ಧರ್ಮವನ್ನು ಪ್ರಸಾರ ಮಾಡಿದವಳು. ಆದರೆ ಮಕ್ಕಳನ್ನು ಕಳೆದುಕೊಂಡ ತಾಯಂದಿರಿಗೆ ಇವಳು ನೀಡಿದ ಸಾಂತ್ವನದಿಂದಾಗಿ ಸದಾ ಜನಮಾನಸದಲ್ಲಿ ನೆಲೆಯಾದವಳು. ಇಲ್ಲಿ ಬಳಸಿದ ಭೂತ ಹಾಗೂ ವರ್ತಮಾನದ ಸಂಯೋಜನೆಯ ತಂತ್ರಗಾರಿಕೆ ಗಮನ ಸೆಳೆಯುತ್ತದೆ. ಆಶಾರಘುರವರ ಕಟ್ಟುವುಕೆಯಲ್ಲಿನ ಕಸಬುದಾರಿಕೆ ಎದ್ದು ಕಾಣುತ್ತದೆ. ಆಶಾರವರಿಂದ ಇನ್ನಷ್ಟು ಹೊಸತನ್ನು ನಿರೀಕ್ಷಿಸುತ್ತ ಶುಭ ಹಾರೈಸುತ್ತೇನೆ.
ಶ್ರೀದೇವಿ ಕೆರೆಮನೆ