
ಉತ್ತರಕಾಂಡದಲ್ಲಿ ದುರಂತ ಅಂತ್ಯವಿದೆ. ಸೀತೆ ಲವಕುಶರನ್ನು ಶ್ರೀರಾಮನಿಗೊಪ್ಪಿಸಿ ಕೃತಕೃತ್ಯಳಾಗಿ ತನ್ನ ತಾಯಿ ಭೂದೇವಿಯಲ್ಲಿ ವಿಲೀನಳಾಗುತ್ತಾಳೆ. ಆದರೆ ಇಲ್ಲಿ ಸೀತಾರಾಮರು ರಾಜ್ಯವನ್ನು ಮಕ್ಕಳಿಗೊಪ್ಪಿಸಿ ಸ್ವತಂತ್ರರಾಗುತ್ತಾರೆ. ಎಲ್ಲರಿಂದ ದೂರವಾಗಿ ಉಳಿದ ಆಯುಷ್ಯವನ್ನು ಏಕಾಂತದಲ್ಲಿ ಜೊತೆಯಾಗಿ ಕಳೆಯಲು ನಿರ್ಧರಿಸುತ್ತಾರೆ. ಹೆಂಡತಿಯಾದವಳು ಗಂಡನ ಸಹಚಾರಿಣಿಯೆಂಬುದು ನಮ್ಮ ಸಾಮಾನ್ಯ ನಂಬಿಕೆಯಾಗಿದೆ. ಆದರೆ ‘ಚೂಡಾಮಣಿ’ ನಾಟಕದಲ್ಲಿ ಕೊನೆಗೆ ರಾಮನೇ ಸೀತೆಯನ್ನು ಹಿಂಬಾಲಿಸಲು ಬಯಸುವ ಸನ್ನಿವೇಶ ನಿಜಕ್ಕೂ ಹೃದಯಂಗಮವಾಗಿದೆ. ಶ್ರೀಮತಿ ಆಶಾ ರಘು ಅವರ ಉತ್ಸಾಹ ಮತ್ತು ಧ್ಯಾನಶೀಲತೆಗಳು ಇಂದಿನ ಯುವಲೇಖಕರಿಗೆ ನಿಜಕ್ಕೂ ಒಂದು ಮೇಲ್ಪಂಕ್ತಿಯಾಗಿದೆ.
ಡಾ.ಟಿ.ಎನ್.ವಾಸುದೇವಮೂರ್ತಿ
***
ನೆನಪಿನ ಬುತ್ತಿಯಾಗಿ ದಾಂಪತ್ಯದ ಧ್ಯೋತಕವಾಗಿ ಚೂಡಾಮಣಿಯ ನಿರ್ವಚನವಾಗುತ್ತಲೇ ಕುಟೀರ ಮತ್ತು ಅಯೋಧ್ಯೆ ಎಂಬ ಎರಡು ಚಿತ್ರಣಗಳ ಮೂಲಕ ಭಿನ್ನ ಸಾಮಾಜಿಕ ಸಂದರ್ಭಗಳನ್ನು ನಿರೂಪಣೆ ಮಾಡುವುದು ಈ ನಾಟಕದ ಶಕ್ತಿಗಳಲ್ಲಿ ಮುಖ್ಯವಾದುದು, ಆಪ್ತವಾಗಿ ಸಂವಹನ ಮಾಡುವ ಪಾತ್ರಗಳು, ದೇಸಿ ನುಡಿಗಟ್ಟು, ಕಥೆ ಹೇಳುವ ತಂತ್ರ, ಕಾವ್ಯಾತ್ಮಕ ಭಾಷ, ಕಥಾ ಹಂದರಕ್ಕೆ ಪೂರಕವಾಗಿ ನಿಲ್ಲುವ ಹಾಡುಗಳು, ಸನ್ನಿವೇಶ ಮತ್ತು ದೃಶ್ಯಗಳ ಕಟ್ಟುವಿಕೆ, ನವಿರು ಸಂಭಾಷಣೆ ಇತ್ಯಾದಿಗಳು ನಾಟಕವನ್ನು ಓದಲು ಪ್ರಿಯವೆನಿಸುತ್ತದೆ.
ಶ್ರೀ ಬೇಲೂರು ರಘುನಂದನ