

ಒಬ್ಬ ಯುವತಿಯ ಮಹತ್ವಾಕಾಂಕ್ಷೆಯ ಕೃತಿ ಈ ಪುಸ್ತಕ. ಅತಿ ಪ್ರಾಚೀನ ಕಾಲದ ಕಲ್ಪಿತ ಸಾಮ್ರಾಜ್ಯದಲ್ಲಿ ನಡೆಯಿತೆಂಬಂತೆ, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳ ಸುಳಿಯಲ್ಲಿ ಸಿಕ್ಕಿಕೊಂಡು ಅದರಿಂದ ಹೊರಬರಲು ಪ್ರಯತ್ನಿಸುವ ಒಬ್ಬ ರಾಜನ ಕಲ್ಪಿತ ಜೀವನವೇ ಇದರ ವಸ್ತು. ತಾತ್ವಿಕ ಚಿಂತನೆಯ ಪ್ರಾಧಾನ್ಯವುಳ್ಳ ಕೃತಿ. ಬರವಣಿಗೆ ಸರಳವಾಗಿದೆ. ಈ ಕೃತಿಯು ಕನ್ನಡ ಸಾಹಿತ್ಯದ ಈ ಕಾಲದಲ್ಲಿ ರಚಿತವಾಗಿರುವುದು ಒಂದು ಆಸಕ್ತಿಯ ವಿಚಾರ. ಓದುಗರ ಪ್ರೀತಿಯನ್ನು ಸಂಪಾದಿಸಲಿ ಎಂದು ಹಾರೈಸುತ್ತೇನೆ.
ಪ್ರೊ. ಜಿ. ವೆಂಕಟಸುಬ್ಬಯ್ಯ
ಅರಿಷಡ್ವರ್ಗಗಳ ಸುಳಿಯಲ್ಲಿ ಸಿಕ್ಕಿ ತೊಳಲುತ್ತ, ಬಿಡಿಸಿಕೊಳ್ಳಲು ಯತ್ನಿಸುವ ವ್ಯಕ್ತಿಯೊಬ್ಬನ ಬದುಕಿನ ಚಿತ್ರಣ ಈ ಕಾದಂಬರಿಯ ವಸ್ತು. ಪುರಾಣದ ದೇಶಕಾಲಗಳಲ್ಲಿ ಕಥೆಯು ಸಾಗುತ್ತದೆ. ವಾತಾವರಣವನ್ನು ನಿರ್ಮಿಸಲು ಬೇಕಾದ ಹಳೆಗನ್ನಡ, ನಡುಗನ್ನಡ ಭಾಷೆಯನ್ನು ಹದವರಿತು ಬಳಸಿದ್ದಾರೆ. ಇಂತಹ ವಸ್ತುವನ್ನು ನಿರ್ವಹಿಸುವ ಧಾರಣಾಶಕ್ತಿ ಆಶಾರವರಿಗೆ ಇದೆ. ಒಳ್ಳೆಯ ಕಾದಂಬರಿಗಾರ್ತಿಯಾಗಿ ಬೆಳೆಯುವ ಸೂಚನೆಗಳಿವೆ.
ಡಾ.ಎಸ್.ಎಲ್.ಭೈರಪ್ಪ


ವಿಶ್ವಸೃಷ್ಟಿಯ ಪ್ರಭಾವಲಯದಲ್ಲಿ ಬೆಳೆದು ಹೊಳೆಯುವ ಪ್ರಕೃತಿ ಸೌಂದರ್ಯದಂತೆ, ಕಾದಂಬರಿಯ ಕಥಾನಕದ ಪ್ರತಿ ಘಟ್ಟವೂ ಸ್ವಯಂ ಸುಂದರ. ಅಂತೆಯೇ ಅಲ್ಲಿನ ಪ್ರೀತಿ, ಪ್ರಣಯ, ವಾತ್ಸಲ್ಯಗಳು ಆಸ್ವಾದ್ಯವಾಗುವಂತೆ, ರಾಗ, ದ್ವೇಷ, ಶೋಕ, ಕ್ರೋಧ, ಭೀಭತ್ಸಗಳೂ ಕೂಡ ಸಹೃದಯ ಶ್ರೋತ್ರುವಿನ ಚಿತ್ತಚೇತೋಹಾರಿಯಾಗುವಂತೆಸಗುತ್ತವೆ. ಸಾಹಿತಿ ಆಶಾರಘುರವರ ‘ಆವರ್ತ’ ಒಂದು ಅಧ್ಯಾತ್ಮ ವಸ್ತುವಾಧಾರಿತ ಸಾಂಕೇತಿಕ ಕಾದಂಬರಿಯಾದರೂ ವಾಸ್ತವತೆಯ ನೆಲಗಟ್ಟಿನ ಮೇಲೆ ನಿಂತ ಸಹಜ ಜೀವನದ ಸತ್ಯಸಾಕ್ಷಾತ್ಕಾರ ಸ್ವರೂಪಿ ತಾನಾಗಿದೆ.
ಡಾ. ಸಾ. ಶಿ. ಮರುಳಯ್ಯ
ಮಹಾ ಕಾದಂಬರಿಗಳೆಂದು ನಾವು ಕರೆಯುವ ಕೆಲವು ಕೃತಿಗಳು ಎಲ್ಲವನ್ನೂ ಒಳಗೊಳ್ಳುವ ಹಾಗೂ ಎಲ್ಲವನ್ನೂ ಕಾಣಿಸುವ ತಮ್ಮ ಕಲೆಗಾರಿಕೆಯಿಂದಲೇ ನಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತವೆ ಎನ್ನುತ್ತಾರಷ್ಟೆ. ಈ ಮಾತನ್ನು ಸಮರ್ಥಿಸುವಂತೆ ಓದುಗರ ಮೇಲೆ ಪ್ರಭಾವ ಬೀರುವ ಎರಡು ಅಂಶಗಳನ್ನು ಮರೆಯುವಂತಿಲ್ಲ. ಒಂದು ಅಂಥ ಕೃತಿಗಳ ಲೇಖಕರ ಗದ್ಯದ ಮಾಂತ್ರಿಕತೆ; ಇನ್ನೊಂದು ಅವರ ಸಂರಚನಾ ನೈಪುಣ್ಯ. ‘ಆವರ್ತ’ದಂಥ ಬೃಹತ್ಪ್ರಮಾಣದ, ಮಹತ್ವಾಕಾಂಕ್ಷೆಯ ಕಾದಂಬರಿ ಬರೆಯುವವರು ಎದುರಿಸಬೇಕಾಗುವ ವಿವಿಧ ಸಮಸ್ಯೆಗಳನ್ನು ಅಥವಾ ಸವಾಲುಗಳನ್ನು ನಾಲ್ಕು ಪ್ರಮುಖ ವಿಭಾಗಳಾಗಿ ವಿಂಗಡಿಸಬಹುದು: 1. ನಿರೂಪಣೆ, 2. ಅವಕಾಶ (ಸ್ಪೇಸ್), 3. ಕಾಲ, 4. ವಾಸ್ತವಿಕತೆಯ ಹಂತ. ಆಶಾರಘು ಈ ಸಮಸ್ಯೆಗಳನ್ನು ಅಥವಾ ಸವಾಲುಗಳನ್ನು ಎಷ್ಟು ಯಶಸ್ವಿಯಾಗಿ ನಿಭಾಯಿಸಿದ್ದಾರೆಂಬುದಕ್ಕೆ ಈ ಕೃತಿಯ ಸಂರಚನೆಯೇ ನಿದರ್ಶನವಾಗಿದೆ.
ಶ್ರೀ ಎಸ್.ದಿವಾಕರ್


ಪುರಾಣ ಮತ್ತು ವರ್ತಮಾನವನ್ನು ಒಂದು ಕೂಡು ಬಿಂದುವಿನಲ್ಲಿ ನಿಲ್ಲಿಸಿ ನೋಡಿದ ’ಆವರ್ತ’ದ ತಂತ್ರ ಕನ್ನಡಕ್ಕೆ ಹೊಸಬಗೆಯದು. ಕಾಲ ದೇಶಗಳನ್ನು ಮೀರಿ ನಿಲ್ಲಬಲ್ಲ ಮನುಷ್ಯ ಸ್ವಭಾವದ ಚಿತ್ರಣದಲ್ಲಿ ಈ ಕಾದಂಬರಿಯ ಯಶಸ್ಸು ನಿಂತಿದೆ. ಈ ಮೂಲಕ ಕನ್ನಡ ಕಾದಂಬರಿಗೆ ಹೊಸಬಗೆಯ ಆಕೃತಿ ಸಾಧ್ಯತೆಯನ್ನು ಕೊಟ್ಟ ಆಶಾ ರಘುರವರಿಗೆ ಅಭಿನಂದನೆಗಳು.
ಪ್ರೊ.ಎ.ವಿ.ನಾವಡ
ನಮ್ಮ ತತ್ವಶಾಸ್ತ್ರ ಪುರಾಣಗಳನ್ನು ಆಧರಿಸಿ ಕಾಲ್ಪನಿಕತೆಯನ್ನು ಭಿನ್ನಕಾಣದಂತೆ ಬೆರೆಸಿ ’ಆವರ್ತ’ದಂತಹ ಒಂದು ದೀರ್ಘ ಗಂಭೀರ ಕಾದಂಬರಿಯನ್ನು ರಚಿಸಲು ಸಾಧ್ಯವಾಯಿತು ಎಂಬುದೇ ದೊಡ್ಡ ಹೆಮ್ಮೆ. ಇದಕ್ಕೆ ಬೇಕಾದ ತುದಿಕಡಿಯದ ಧ್ಯಾನ, ಪಾತ್ರಗಳ ಜೊತೆಗೇ ಬದುಕುತ್ತ ಹೋದಂತೆ ಆವಾಹಿತವಾದ ’ಇನ್ನೊಂದು ಬದುಕು’, ಹಾಗೆ ಬದುಕುತ್ತಲೇ ಅದನ್ನು ಕಥಾನಕವಾಗಿ ಸುಂದರ ಕನ್ನಡದಲ್ಲಿ ಭಾವಪೂರ್ಣವಾಗಿ ಬೆಳೆಸಿಕೊಂಡು ಹೋದ ಪರಿ, ಅಗಾಧ ಪರಿಶ್ರಮ ಎಲ್ಲವೂ ಬರಹಗಾರ್ತಿಯಾದ ನನ್ನನ್ನು ಅಚ್ಚರಿ ಬೀಳಿಸಿದೆ. ನಿಮ್ಮ ಅನುಪಮ ತಾದಾತ್ಮ್ಯವನ್ನು, ಮೊದಲ ಕೃತಿಯಲ್ಲೇ ಮೆರೆದ ಪ್ರೌಢತೆಯನ್ನು, ಕಣ್ಣ ಮುಂದೆ ಸಾಗುವ ಕಥೆಗೆ ಕಾಲಾತೀತತೆಯ ಸೊಬಗು ನೀಡಿ ಮುನ್ನಡೆಸಬಲ್ಲ ನಿಮ್ಮ ಕಲ್ಪನಾಶಕ್ತಿಯನ್ನು, ಸೃಜನಶೀಲತೆಯನ್ನು ಮನದುಂಬಿ ಅಭಿನಂದಿಸುವೆ.
ಎಂದು ನಿಮ್ಮ,
ವೈದೇಹಿ


ಸಾವಿನಲ್ಲಿ ಹರಿದು ಹೋಗುತ್ತಿದ್ದ ಪ್ರತೀಪ ದಡಕ್ಕೆ ಬಿದ್ದು ಮತ್ತೆ ಬದುಕನ್ನು ಪ್ರವೇಶಿಸುತ್ತಾನೆ. ಅವನ ಬದುಕಿನಲ್ಲಿ ಬರುವ ಹೆಣ್ಣುಗಳು ಅರಿಷಡ್ವರ್ಗಗಳ ಭಾವ ಸಂಕೇತಗಳು. ಪುರಾಣ, ಚರಿತ್ರೆ, ಸಮಕಾಲೀನ ಬದುಕುಗಳಾಚೆಯ ಒಂದು ಸುಂದರ, ಕಾಲ್ಪನಿಕ ಜಗತ್ತು ಕಾದಂಬರಿಗೆ ಭೂಮಿಕೆಯನ್ನು ಒದಗಿಸಿಕೊಡುತ್ತದೆ. ಇಲ್ಲಿಯ ನಾಯಕ ನಾನಾ ಅನುಭವಗಳಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತ, ಮನುಷ್ಯನ ಸಂವೇದನೆಗಳು, ಮನುಷ್ಯ ಸಂಬಂಧಗಳ ಸೆಳೆತದಲ್ಲಿ ಅಂತಿಮವಾಗಿ ಬದುಕಿನಲ್ಲಿ ’ಪ್ರೀತಿ’ ಗಟ್ಟಿಯಾದದ್ದು ಎಂಬ ಸತ್ಯ ಕಂಡುಕೊಳ್ಳುತ್ತಾನೆ. ಕಾದಂಬರಿಯ ಪುಟಪುಟದಲ್ಲೂ ಜೀವನಶ್ರದ್ಧೆ, ರುಚಿಪ್ರಜ್ಞೆ, ಪ್ರೀತಿಯ ಚಡಪಡಿಕೆ ಕಾಣಿಸುತ್ತದೆ. ಆಶಾ ಅವರ ’ಆವರ್ತ’ ಐಂದ್ರಿಕ ಜಗತ್ತಿನ ಮೂಲಕವೇ ಇಂದ್ರೀಯಾತೀತ ಅನುಭಗಳನ್ನು ಕಟ್ಟಿಕೊಡುವ ಅತ್ಯುತ್ತಮ ಸಂಗೀತ ಕಾವ್ಯವಾಗಿದೆ.
ಡಾ. ಮಂಗಳಾ ಪ್ರಿಯದರ್ಶಿನಿ
’ಆವರ್ತ’ ಕಾದಂಬರಿಯ ಕುರಿತು ಹೆಸರಾಂತ ವಿಮರ್ಶಕರಾದ ಡಾ.ಎಂ.ಎಸ್.ಆಶಾದೇವಿಯವರು.. ಪುರಾಣ ಮತ್ತು ಇತಿಹಾಸಗಳನ್ನು ರೂಪಾಂತರಗಳಲ್ಲಿ ಮರು ಭೇಟಿಯಾಗುವುದು ಒಂದು ರೋಮಾಂಚನಕಾರಿ ಅನುಭವ. ಈ ಕೃತಿ ಅಂತಹ ರೋಮಾಂಚನಕಾರಿ ಅನುಭವ ನೀಡುತ್ತದೆ. ದೇಶಕಾಲಗಳ ಕಾಲಬದ್ಧತೆಯನ್ನೂ, ಮನುಷ್ಯ ಸ್ವಭಾವದ ಕಾಲಾತೀತತೆಯನ್ನೂ ಎದುರುಬದುರಾಗಿಸುವ ಈ ಕೃತಿ ನಿಜವಾದ ಅರ್ಥದಲ್ಲಿ ಪ್ರಯೋಗಶೀಲ ಕೃತಿ.
ಡಾ.ಎಂ.ಎಸ್.ಆಶಾದೇವಿ


ಸಾಧಾರಣ ಕಾದಂಬರಿಗಳಲ್ಲಿ ನಾಲ್ಕೈದು ಪಾತ್ರಗಳನ್ನ ಇಟ್ಟುಕೊಂಡು ಬರೆಯುವುದು ವಾಡಿಕೆ. ಆದರೆ ಆಶಾ ರಘುರವರ ಕಾದಂಬರಿ ’ಆವರ್ತ’ ದಂಡಕಾರಣ್ಯ ಇದ್ದಹಾಗೆ! ಸುಮಾರು ನೂರ ಐವತ್ತು ಪಾತ್ರಗಳನ್ನ ಸೃಷ್ಟಿಸಿ, ನಿರ್ವಹಿಸಿದ್ದಾರೆ. ನಮಗೆ ಸಾಮಾನ್ಯ ಬದುಕಿನಲ್ಲಿಯೇ ನೂರ ಐವತ್ತು ಜನರನ್ನ ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟಕರವಾದ ಕೆಲಸ! ಆದರೆ, ಆಶಾರಘುರವರು ಕಾದಂಬರಿಗಾಗಿ ಇಷ್ಟು ಸಂಖ್ಯೆಯ ಪಾತ್ರಗಳನ್ನ ನಿರ್ವಹಿಸಿರೋದು, ಅವರುಗಳ ನಡುವೆ ಸಂಬಂಧಗಳನ್ನ ಹೆಣೆದು, ಹಲವು ಸನ್ನಿವೇಶಗಳನ್ನ ನಿರ್ಮಾಣ ಮಾಡಿ, ಕಾಡು, ಬೆಟ್ಟ, ನದಿ, ಜರಿ, ಜಲಪಾತ, ಹಳ್ಳಿ, ಗುಡಿಸಲು, ಅರಮನೆ.. ಹೀಗೆ ಹಲವು ಆವರಣಗಳನ್ನ ಸೃಷ್ಟಿಸಿ, ಅದರಲ್ಲಿ ಜೀವಂತಿಕೆಯನ್ನ ತಂದು ಕೃತಿಯನ್ನ ರಚಿಸಿರೋದು ಸಾಧಾರಣವಾದ ಕೆಲಸವಲ್ಲ!
ಡಾ.ಪಿ.ವಿ.ನಾರಾಯಣ
ಅಸಾಧಾರಣ ಕಲ್ಪನಾಶಕ್ತಿ ಮಡುಗಟ್ಟಿನಿಂತಂತಹ ಕಲಾಕೃತಿ ಇದು. ಪುರಾಣಗಳು ಸಂಸ್ಕೃತಿಯೊಂದರ ಮರೆತುಹೋದ ಭಾಷೆ ಎಂಬ ಮಾತೊಂದಿದೆ. ಇಲ್ಲಿ ಪುರಾಣ ಪ್ರಕಾರ ಮೈದಳೆದು ನಾವಿನ್ಯತೆಯ ಪರಿವೇಷ ತೊಟ್ಟು ನಿಂತಿದೆ. ಅದಕ್ಕೊಪ್ಪುವ ಭಾಷೆಯಿಂದ ಅಲಂಕೃತಗೊಂಡು ಯಶಸ್ವಿಯಾಗಿದೆ. ಭಾರತೀಯ ಇಂಗ್ಲೀಷ್ ಲೇಖಕರಲ್ಲಿ ಯಾರಾದರೊಬ್ಬರು ಈ ಕಾದಂಬರಿಯನ್ನು ಬರೆದಿದ್ದರೆ ಈ ವೇಳೆಗಾಗಲೇ ಇದೊಂದು ಅಪ್ಪಟ ಭಾರತೀಯ ಕಲಾಕೃತಿ ಎಂಬ ಅಂತರಾಷ್ಟ್ರೀಯ ಖ್ಯಾತಿ ಗಳಿಸಿಬಿಡುತ್ತಿತ್ತು!
ಶ್ರೀ ಅಗ್ರಹಾರ ಕೃಷ್ಣಮೂರ್ತಿ


ಈ ಕಾದಂಬರಿಯಲ್ಲಿ ನನ್ನನ್ನು ಬಹುವಾಗಿ ಸೆಳೆದಿದ್ದೆಂದರೆ ಇದರಲ್ಲಿರುವ ಅಗಾಧವಾದ ಚಿತ್ರಕ ಶಕ್ತಿ. ಇಂತಹ ಬೃಹತ್ ಪ್ರಮಾಣದ ಕಾದಂಬರಿಗಳು ಕನ್ನಡ ಸಾಹಿತ್ಯಲೋಕದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು.
ಶ್ರೀ ಬಿ ಎಸ್ ಜಯಪ್ರಕಾಶ ನಾರಾಯಣ
‘ಆವರ್ತ’ ಆಶಾರಘು ಅವರ ಚೊಚ್ಚಲ ಕಾದಂಬರಿಯಾದರೂ ಅಸಾಧಾರಣವಾದ ಪ್ರವೇಶ. ಶಾಸ್ತ್ರೀಯ ಮತ್ತು ಆಧುನಿಕ ಎರಡನ್ನೂ ಒಳಗುಮಾಡಿಕೊಂಡ ಸೃಜನಾತ್ಮಕವಾದ ಶೈಲಿಯನ್ನು ಪ್ರಯೋಗಿಸಿದ್ದಾರೆ. ನೂರಕ್ಕೂ ಮಿಗಿಲಾದ ವಿಭಿನ್ನವಾದ ಪಾತ್ರಗಳು ಮತ್ತು ಅವು ವಾಸಿಸುವ ವಿಶಿಷ್ಟ ಪ್ರಪಂಚಗಳನ್ನು ರಸವತ್ತಾಗಿ ತುಂಬಿಕೊಂಡ ಈ ಕಥನ, ಇಲ್ಲಿನ ಪ್ರಮುಖ ಪಾತ್ರವಾದ ರಾಜ ಪ್ರತೀಪನ ಬದುಕು ಎದುರಿಸುವ ಅಡೆತಡೆಗಳ ವಿವಿಧ ಮಗ್ಗಲುಗಳನ್ನು ನಿರಂತರವಾಗಿ ಅನಾವರಣಗೊಳಿಸುತ್ತಾ ಸಾಗುತ್ತದೆ. ಉತ್ತಮ ಹಾಗೂ ಮಧ್ಯಮ ಪುರುಷ ನಿರೂಪಣೆಗಳು ಒಂದರಿಂದ ಇನ್ನೊಂದಕ್ಕೆ ಬದಲಾಗುತ್ತಾ ಸಾಗುವ ಈ ಕಥನ ಶೈಲಿಯಿಂದಾಗಿ ಪ್ರತೀಪ ನಮ್ಮ- ನಿಮ್ಮ ಪ್ರತಿರೂಪವೇ ಆಗಿಬಿಡುತ್ತಾನೆ. ನಿಸ್ಸಂದೇಹವಾಗಿ ಈ ಕಾದಂಬರಿ ಸಮೃದ್ಧ ಕನ್ನಡ ಸಾಹಿತ್ಯಕ್ಕೆ ಒಂದು ಮಹತ್ತರವಾದ ಕೊಡುಗೆ. ಲೇಖಕಿ ಆಶಾ ಅವರಿಗೆ ಎಲ್ಲ ರೀತಿಯ ಯಶಸ್ಸು ಸಿಗಲಿ ಎಂದು ಹಾರೈಸುತ್ತಾ, ಅವರ ಮುಂದಿನ ಕೃತಿಗಳನ್ನು ಬಹಳ ಕುತೂಹಲದಿಂದ ಎದುರು ನೋಡುತ್ತೇನೆ.
ಶ್ರೀ ಮುಕುಂದ ರಾವ್


ಸದಾ ಅಧ್ಯಯನಶೀಲೆಯಾದ ಶ್ರೀಮತಿ ಆಶಾ ರಘು ಅವರ ’ಆವರ್ತ’ ಕಾದಂಬರಿ ಎರಡನೆಯ ಮುದ್ರಣ ಕಾಣುತ್ತಿದೆ ಎಂದಮೇಲೆ ಕಾದಂಬರಿಯ ಮೌಲ್ಯವನ್ನು ಅಳತೆಗೋಲಿನಿಂದ ಅಳೆಯಲು ಸಾಧ್ಯವಿಲ್ಲವೆಂದೇ ಹೇಳಬೇಕಾಗುತ್ತದೆ. ಕಾದಂಬರಿ ಕ್ಷೇತ್ರಕ್ಕೆ ಅತ್ಯುತ್ತಮವಾದ ಆವರ್ತ ಕಾದಂಬರಿಯನ್ನು ಕೊಟ್ಟ ಆಶಾ ಅವರ ಅನುಭವದ ವಿಸ್ತಾರವೂ ಅಷ್ಟೇ ದೊಡ್ಡದೆಂದು ಹೇಳಬಯಸುತ್ತೇನೆ. ಕಾದಂಬರಿಯ ಪ್ರಧಾನ ಪಾತ್ರ ದೊರೆ ಪ್ರತೀಪನಾಗಲೀ, ಅವನ ಬದುಕಿನಲ್ಲಿ ಪ್ರವೇಶಿಸುವ ಪ್ರಮದ್ವರೆ, ಮದುವಂತಿ, ಲಾಕ್ಷಿ, ಸತ್ಯವತಿ, ಶ್ಲಾಘ್ಯದೇವ್ವಿ, ಕಾಂತಲತೆ.. ಈ ಆರು ಮಂದಿ ಸ್ತ್ರೀಯರೇ ಆಗಲಿ ಪಾತ್ರಕ್ಕೆ ತಕ್ಕಂತೆ ಶೋಭಿಸುತ್ತಾರೆ. ಅರಿಷಡ್ವರ್ಗಗಳ ಜೊತೆ ಸಮನ್ವಯಗೊಳ್ಳುವ ಸ್ತ್ರೀ ಪಾತ್ರಗಳು ಪೌರಾಣಿಕ ಹಿನ್ನಲೆಯಿಂದ ಬಂದವು. ಅಸಮಾನ್ಯವಾದ ಗುರುತ್ವ ಉಳ್ಳವು. ಶ್ರೀಮತಿ ಆಶಾ ರಘು ಅವರು ಚಾಕಚಕ್ಯತೆಯಿಂದ ಆ ಕಾಲಘಟ್ಟವನ್ನಿಟ್ಟುಕೊಂಡು ಕಾದಂಬರಿ ನಿರೂಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದಲ್ಲದೆ, ಅಲೌಕಿಕ ಎನಿಸುವ ನೂರಾರು ಪಾತ್ರಗಳು ಇಲ್ಲಿ ಬಂದುಹೋಗುತ್ತವೆ. ಇದನ್ನು ಓದುವಾಗ ನಾವು ಪುರಾಣದ ಕಾಲಘಟ್ಟದಲ್ಲಿರುವಂತೆ ಭಾಸವಾಗುತ್ತದೆ. ಅಲ್ಲದೆ ಈ ಕಾದಂಬರಿಯ ವಸ್ತು, ನಿರೂಪಣೆ, ತಂತ್ರ ಎಲ್ಲವೂ ಅಪ್ಯಾಯ ಎನಿಸುತ್ತದೆ. ನಮ್ಮನ್ನು ಮೋಡಿ ಮಾಡುತ್ತದೆ. ಕಲ್ಪನೆ ಹಂದರದಲ್ಲಿ ಕಾದಂಬರಿ ಮೂಡಿ ಬಂದರೂ, ಪುರಾಣದ ಹಿನ್ನಲೆ ಇದ್ದರೂ, ಪ್ರಸ್ತುತ ಬದುಕಿನಲ್ಲಿ ನಾವು ಕಾಣುತ್ತಿರುವ ಸಂಘರ್ಷ, ಸಮಸ್ಯೆಗಳು ಎಲ್ಲವೂ ಇದ್ದು, ಆವರ್ತದ ಪಾತ್ರಗಳೆಲ್ಲವೂ ಸಹಜ ಸ್ವಭಾವವಾಗಿ ಮಿಂಚುವುದನ್ನು ಕಾಣುತ್ತೇವೆ. ಆದ್ದರಿಂದ ಕಾದಂಬರಿ ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ.
ಶ್ರೀಮತಿ ಪ್ರೇಮಾ ಭಟ್
ದಾಖಲಿತ ಗತವೈಭವದ ಐತಿಹಾಸಿಕ ಘಟನೆಗಳ ಅಧಿಕೃತ ವಿವರಗಳನ್ನು ಕೃತಿಯಲ್ಲಿ ಪುನರ್ಸೃಷ್ಟಿಸುವ ಸ್ವೀಕೃತ ಜಾಡನ್ನು ಸಂಪೂರ್ಣವಾಗಿ ತ್ಯಜಿಸಿ, ಪೌರಾಣಿಕ ಕಥನಕ್ರಮವನ್ನು ವಿಭಿನ್ನ ಶೈಲಿಯಲ್ಲಿ ಸ್ಪರ್ಶಿಸಿ, ಅಪ್ಪಟ ಕಾಲ್ಪನಿಕ ಲೋಕವೊಂದನ್ನು ಕಟ್ಟಿಕೊಡುವ ಆಶಾ ರಘು ಅವರು ಇಲ್ಲಿ ತೊರೆದಿರುವುದು ಕೇವಲ ಕಾಲದೇಶಗಳ ಇತಿಮಿತಿಯನ್ನಷ್ಟೇ ಅಲ್ಲ, ಕಾಲಾತೀತ ಆಯಾಮವೊಂದು ಸೋಜಿಗವೆನ್ನುವಷ್ಟು ಸಹಜತೆಯಲ್ಲಿ ನಿರಾಯಾಸದಿಂದ ಅರಳಿ ಒಡಮೂಡುವುದಕ್ಕೂ ಕಾರಣಕರ್ತರಾಗಿದ್ದಾರೆ. ರಮ್ಯ, ಮನಮೋಹಕ ಒಳನೇಯ್ಗೆಗಳಿಂದ ಸಂಪದ್ಭರಿತವಾಗಿರುವ ಈ ಕಾದಂಬರಿಯ ಪ್ರಧಾನ ಪಾತಳಿಯಲ್ಲಿ ಮಾನವ ಮನೋಭೂಮಿಕೆಯಲ್ಲಿ ಅಂತರ್ಗತವಾಗಿರುವ ಅರಿಷಡ್ವರ್ಗಗಳ ನಿರಂತರ ಸಂಘರ್ಷವನ್ನು ಪುನರ್ಶೋಧಿಸಲಾಗಿದೆ. ಕೇಂದ್ರ ಪಾತ್ರ ಮಹಾರಾಜ ಪ್ರತೀಪನ ಬಾಹ್ಯ ಜಗತ್ತಿನ ವಿಕ್ರಮ ಹಾಗೂ ಅವನ ಆಂತರ್ಯದ ದ್ವಂದ್ವ, ತಿಕ್ಕಾಟ, ಘರ್ಷಣೆಗಳು ಜೀವನದ ಆವರ್ತದಲ್ಲಿ ಅಡಿಗಡಿಗೆ ಮರುವ್ಯಾಖ್ಯಾನಕ್ಕೆ ಒಳಗಾಗುತ್ತಲೇ ಬರುತ್ತದೆ. ಜೀವರಸದಲ್ಲಿ ಮುಳುಗಿ, ಪಳಗಿ, ಮೆದುವಾಗುವುದರೊಂದಿಗೆ ಸೋಲು ಗೆಲುವು ಅಮುಖ್ಯವೆನ್ನಿಸುವ ಹೊಸ ಆತ್ಮಾನುಭೂತಿಯಿಂದ ಸಾಥ್ರ್ಯಕ್ಯಗೊಂಡ ಅವನ ರಸಾನುಭವವೇ ಇಲ್ಲಿ ಪೌರಾಣಿಕ ಚೌಕಟ್ಟನ್ನು ಮೀರಿದ ಮನುಕುಲದ ಕಥನವಾಗಿದೆ.
ಶ್ರೀಮತಿ ಜಯಶ್ರೀ ಕಾಸರವಳ್ಳಿ


’ಆವರ್ತ’ ಕಾದಂಬರಿಯಲ್ಲಿ ಭಾಷೆಯ ಲವಲವಿಕೆಯ ನಿರೂಪಣೆಯಿದೆ. ಆಶಾರಘು ಅವರ ಮೂಲಕ ಮೂಡಿಬಂದ ವಿಶಾಲ ಭಿತ್ತಿಯ ಈ ಕಾದಂಬರಿಯಲ್ಲಿ ಹುಟ್ಟುವ ಪ್ರಶ್ನೆ ಮಾನವ ಕುಲಕ್ಕೆ ಮಾರಕವಾಗಿರುವ ಅರಿಷಡ್ವೈರಿಗಳೆನಿಸಿದ ಕಾಮ, ಕ್ರೋಧ, ಲೋಭ ಮೊದಲಾದವು, ಹೆಣ್ಣಿನ ರೂಪಗಳು ನಿಮಿತ್ತ ಮಾತ್ರವಾಗುವುದನ್ನು., ಕಾದಂಬರಿ ನಾಯಕ ಪ್ರದೀಪ ಎಂಬ ರಾಜ ಹೇಗೆ ದುರ್ಬಲನಾಗುತ್ತಾನೆ ಎಂಬುದನ್ನು.. ಶೋಧಿಸಲು ತೊಡಗುತ್ತದೆ. ಹಾಗೆಯೇ ಹೊರಗೆ ತೋರುವ ವಾಸ್ತವತೆ ಮತ್ತು ಅಂತಃಪ್ರಜ್ಞೆಗೆ ಹೊಂದಾಣಿಕೆ ಸಾಧ್ಯವೇ ಎನ್ನುವ ಪ್ರತೀಪನ ಸಂಘರ್ಷ ಮತ್ತು ತಲ್ಲಣಗಳು ಓದುಗರನ್ನು ಕೆಣಕುವಂತಿದೆ.
ಶ್ರೀಮತಿ ಕೆ.ತಾರಾ ಭಟ್
’ಆವರ್ತ’ ಒಂದು ವಿಭಿನ್ನವಾದ ಕಾದಂಬರಿ. ಕಾಮ, ಕ್ರೋಧ ಮುಂತಾದ ಅರಿಷಡ್ವರ್ಗದಲ್ಲಿ ಸಿಲುಕಿಕೊಂಡು ತೊಳಲಾಡುವ, ಬಿಡಿಸಿಕೊಳ್ಳಲು ಯತ್ನಿಸುವ ವ್ಯಕ್ತಿಯೊಬ್ಬನ ಕಥೆ. ಆ ವ್ಯಕ್ತಿ ಅನುಭವಿಸುವ ಎರಡು ಪದಗಳನ್ನು ಕಂಡುಕೊಳ್ಳುವುದೇ ಕಾದಂಬರಿಯ ಮುಖ್ಯ ತಿರುವು. ಆತ್ಮಜ್ಞಾನಕ್ಕೂ, ಲೌಕಿಕ ಬದುಕಿಗೂ ಸಮನ್ವಯ ಸಾಧಿಸುವ ಹೊಳಹು ಆಶಾರಘು ಅವರ ಕಾದಂಬರಿಯ ತಿರುಳು. ವೈದಿಕ ಧರ್ಮದ ವಿಚಾರವನ್ನು ತಳಹದಿಯನ್ನಾಗಿ ಹೊಂದಿದ್ದರೂ ಅದು ವ್ಯಕ್ತಪಡಿಸುವುದು ಬದುಕಿನ ತತ್ವವನ್ನು. ಮೋಕ್ಷಕ್ಕಾಗಿ ಕಾಡಿಗೆ ಹೋಗಬೇಕಾಗಿಲ್ಲ, ನಿಜ ಬದುಕಿನಲ್ಲಿಯೇ ಸಾಧನೆ ಸಾಧ್ಯ ಎಂದು ಹೇಳಲು ಹೊರಟಿದ್ದಾರೆ. ಕಾದಂಬರಿಯಲ್ಲಿ ರಾಜನ ಪಾತ್ರವೇ ಪ್ರಮುಖವಾದರೂ, ಆತನ ಸಂಪರ್ಕಕ್ಕೆ ಬರುವ ಸ್ತ್ರೀಯರು ಜೀವನ್ಮುಖಿಯರು. ಪ್ರಮದ್ವರೆ ಪಾತ್ರ ಚೆನ್ನಾಗಿ ಮೂಡಿಬಂದಿದೆ. ತನ್ನ ಸಾತ್ವಿಕತನದಿಂದ ಹಾಗೂ ಪ್ರೇಮ, ಕರುಣೆ, ತ್ಯಾಗಗಳಿಂದ ಪ್ರತೀಪನಿಗಿಂತಲೂ ಎತ್ತರದ ಸ್ಥಾನಕ್ಕೆ ಏರುವುದನ್ನು ಕಾಣಬಹುದು. ಆಶಾರಘು ಅನೇಕ ವಿಚಾರಗಳನ್ನು ಇಲ್ಲಿ ತಂದಿದ್ದರೂ ಅವರ ಮುಖ್ಯ ಗುರಿ ಮಾನವೀಯತೆ. ಯಾವುದೋ ಕಾಲಕ್ಕೆ ಜಿಗಿದು, ತನ್ನ ಅನುಭವಗಳನ್ನು ಅದರೊಂದಿಗೆ ಸಮೀಕರಿಸಿ ಹೊಸತೊಂದು ಆಯಾಮ ಸೃಷ್ಟಿಸುವತ್ತ ಆಶಾ ರಘು ಹೊರಟಿರುವುದು ಒಳ್ಳೆಯ ಪ್ರಯತ್ನ ಎಂದು ಭಾವಿಸುತ್ತೇನೆ.
ಶ್ರೀ ಎಂ.ಎನ್.ವ್ಯಾಸರಾವ್


…ಓದುಗರ ಮನೋರಂಗದಲ್ಲೇ ಕಥಾಲೋಕವನ್ನು ಅರಳಿಸಿ ಅದು ಅಲ್ಲಿ ಮಹಾಧಾರೆಯಾಗಿ ತನ್ನದೇ ದೇಶಕಾಲವನ್ನು ಸೃಷ್ಟಿಸಿಕೊಳ್ಳುವಂತೆ ಮಾಡುವ ಅಪ್ರತಿಮ ಕಾದಂಬರಿ ಇದು.
ಶ್ರೀ ನಾಗೇಶ ಹೆಗಡೆ
…ಕನ್ನಡದಲ್ಲಿ ಈಗ ಮತ್ತೆ ಹೊಸ ತಲೆಮಾರಿನ ಕಾದಂಬರಿಕಾರರು ಬರುತ್ತಿದ್ದು, ಅವರಲ್ಲಿ ಆಶಾರಘು ಅವರದು ಭರವಸೆ ಮೂಡಿಸಿರುವ ಹೆಸರು. ಆವರ್ತ ಗಮನಿಸಬೇಕಾದ ಸಾಹಿತ್ಯ ಕೃತಿ.
ಶ್ರೀ ಜಿ.ಬಿ.ಹರೀಶ್


…ವಯಸ್ಸಿಗೆ ಮೀರಿದ ಆಲೋಚನೆ, ವಾಸ್ತವಕ್ಕೆ ಮೀರಿದ ಪರಿಕಲ್ಪನೆ.. ಹೀಗೆ ಬರೆಯುವುದು ತಮಾಷೆಯ ಮಾತಲ್ಲ. ಇದನ್ನು ಪುಸ್ತಕ ರೂಪದಲ್ಲಿ ಕಟ್ಟಿಕೊಡುವುದು ಸುಲಭದ ಮಾತಲ್ಲ. ಇದನ್ನು ಸಾಧ್ಯವಾಗಿಸಿದ್ದು ಆಶಾರಘು!
ಶ್ರೀ ಕೆ.ಕಲ್ಯಾಣ್
…ಒಬ್ಬ ಮಹಿಳೆ ಈ ಪ್ರಮಾಣದ ಕಾದಂಬರಿಯೊಂದನ್ನು ಬರೆದಿರುವುದು ನನಗೆ ಸಂತಸ ತಂದಿದೆ.
ಶ್ರೀ ಕುಂವೀ


ಈ ಕಾದಂಬರಿಯ ರಚನೆಯಲ್ಲಿ ಲೇಖಕಿಯ ಅಪಾರ ಶ್ರಮವಿದೆ. ಕಾಲದೇಶಗಳ ಪರಿಧಿ ಮೀರಿ, ಕಾದಂಬರಿಯುದ್ದಕ್ಕೂ ಬರುವ ಘಟನಾವಳಿಗಳು ಕಾದಂಬರಿಗೊಂದು ವಿಶಿಷ್ಟತೆಯನ್ನು ತಂದುಕೊಟ್ಟು, ಒಟ್ಟಾರೆ ಕಾದಂಬರಿಯ ರಚನೆಯ ಹಿಂದೆ ಲೇಖಕಿಯ ಪ್ರಯೋಗಶೀಲತೆ ಎದ್ದುಕಾಣುತ್ತದೆ. ಇದೊಂದು ಹೊಸಭಾವ ಸ್ಪುರಿಸುವ ವಿನೂತನ ಕಾದಂಬರಿ.
ಶ್ರೀಮತಿ ಕೆ.ಶಾರದಾ ಭಟ್
ಕಾಲ ದೇಶಗಳ ಮಿತಿಯನ್ನು ಮೀರಿಸುವ ತಾತ್ವಿಕ ಜಿಜ್ಞಾಸೆಗಳು ಓದುಗನಲ್ಲಿ ದಟೈಸುವಂತೆ ಮಾಡುವ ಈ ಕಾದಂಬರಿ ಹೊಸ ಜೀವನದರ್ಶನವೊಂದನ್ನು ಹೊಳೆಯಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ‘ಆವರ್ತ’ ಲೇಖಕಿಯ ಮೊದಲ ಕಾದಂಬರಿಯಾದರೂ ಅವರ ಬರಹದ ಶೈಲಿ ಅಭಿನಂದನಾರ್ಹ. ದೇಶ ಕಾಲಗಳು ಆಗಾಗ ಪರಸ್ಪರ ಭೇಟಿಯಾಗುವುದನ್ನು ಮನುಷ್ಯ ಸಹಜ ಸ್ವಭಾವಗಳು ವಿಸ್ತರಿಸದೆ ಇದ್ದಲ್ಲೇ ಸುತ್ತಿಕೊಳ್ಳುವುದನ್ನೂ ಈ ಕೃತಿ ಸಾದೃಶ್ಯೀಕರಿಸಿದೆ. ಸದ್ಯದ ಕನ್ನಡದ ಬರಹಗಾರಿಕೆಯ ವ್ಯಾಪ್ತಿ ಮತ್ತು ಸೂತ್ರಗಳನ್ನು ಮೀರಿಸಿದ ಕೃತಿ ಇದಾಗಿದೆ.
ಶ್ರೀ ಡಿ.ಎಸ್.ರಾಮಸ್ವಾಮಿ


..ಒಮ್ಮೆ, ಬಳೆಪೇಟೆಯಲ್ಲಿನ ಸಾಹಿತ್ಯ ಭಂಡಾರಕ್ಕೆ , ಕೆಲ ಸಾಹಿತ್ಯ ಕೃತಿಗಳನ್ನು ಕೊಂಡುಕೊಳ್ಳಲು ಹೋದವನಿಗೆ “ಆವರ್ತ” ಶಿರೋನಾಮೆಯ ಕಾದಂಬರಿ ಕಣ್ಣಿಗೆ ಬಿತ್ತು. ಲೇಖಕರ ಹೆಸರೊದಿದೆ, “ಆಶಾ ರಘು”! ಅವರಾವುದೇ ಕೃತಿಯನ್ನು ಯಾವತ್ತೂ ಓದಿರಲಿಲ್ಲ! ಅಪರಿಚಿತರಾದ ಈ ಲೇಖಕರು ಬರೆದ ಆ ಪುಸ್ತಕವನ್ನು ಖರೀದಿಸಿದೆ. ಎರಡು ದಿನದಲ್ಲಿ ಓದಿ ಮುಗಿಸಿದೆ. ಲೇಖಕರ ಬರವಣಿಗೆಯ ಶೈಲಿ, ವಿಷಯ ಪ್ರತಿಷ್ಠಾಪಿಸುವ ಕ್ರಮ ಮತ್ತು ಘಟನೆಗಳನ್ನು ವಿಘಟಿಸಿ ಅರ್ಥ ನೀಡುವಜಾಣ್ಮೆ, ಓದುಗನಾಗಿ ನನಗೆ ಆಕರ್ಷಣೀಯವೆನಿಸಿತು. ಎಲ್ಲೂ ಬೇಸರ ತಾರದೇ ಓದಿಸಿಕೊಂಡು ಹೋಯಿತು.
ಶ್ರೀ ಶ್ರೀಪತಿ ಮಂಜನಬೈಲು
.ನಮ್ಮ ತಾಳಮದ್ದಳೆ ಕಲಾಪ್ರಕಾರಗಳಲ್ಲಿ ಚಾಲ್ತಿಯಲ್ಲಿರುವ ಪುರಾಣ ಕಥೆಗಳಿಗೆ ಹೊಸ ಅಭಿವ್ಯಕ್ತಿ ಕೊಡುವುದನ್ನು ಕಾಣುತ್ತೇವೆ. ನಿಮ್ಮದು ಹಾಗಲ್ಲ; ವಿಶ್ವಾಮಿತ್ರ ಸೃಷ್ಟಿ!
ಶ್ರೀ ಅಶೋಕವರ್ಧನ


ನಮ್ಮ ನಡುವೆ ನಮ್ಮ ಹಾಗೆಯೇ ಇರುವ ಆಶಾ ರಘು ಅವರಿಂದ ಇಂಥದೊಂದು ಕಾದಂಬರಿ ಮೂಡಿ ಬರಲು ಸಾಧ್ಯವೇ ಎಂಬುದು ಮೊದಲು ಉಂಟಾದ ಅಚ್ಚರಿ! ಓದುತ್ತ ಹೋದಂತೆ ಕೃತಿಯ ಹರಹು, ತಂತ್ರಗಾರಿಕೆ ಮನಸೂರೆಗೊಂಡಿತು.
ಶ್ರೀಮತಿ ವಿದ್ಯಾರಶ್ಮಿ ಪೆಲತಡ್ಕ
ಮಹಿಳಾ ಸಾಹಿತ್ಯದಲ್ಲಿ ಕಾದಂಬರಿ ಪ್ರಯೋಗ ಕಡಿಮೆ, ಅದರಲ್ಲೂ ಪೌರಾಣಿಕ ನೆಲೆಗಟ್ಟಿನಲ್ಲಿ ಕಟ್ಟುವ ಕಾದಂಬರಿಗಳು ಬೆರಳೆಣಿಕೆ. ಹೆಣ್ಣ ಮೋಹದಲ್ಲೇ ಬದುಕುವ ರಾಜ ಅವನ ಭಾವಾವೇಶ, ಹಸಿ ಉಮೇದು, ಇವೆಲ್ಲ ನಮ್ಮದೇ ಪ್ರತಿರೂಪ. ಅಧುನಿಕೋತ್ತರ ಸಾಹಿತ್ಯದಲ್ಲಿ ಸಮಕಾಲಿನ ವೈಚಾರಿಕ ವಿಷಯಗಳೊಂದಿಗೆ ಪ್ಯಾಂಟಸಿಗೆ ಹಚ್ಚುವ, ಕಲ್ಪನೆಯ ಹರಿವನ್ನು ಸೃಜನಾತ್ಮಕಗೊಳಿಸುವ ‘ಆವರ್ತ’ದ ಅವಶ್ಯಕತೆ ಇತ್ತು. ಪುರುಷ ಪೌರುಷ ತುಮುಲ, ಪರಂಪರೆಯಾಗಿ(?) ನಿರ್ಮಾಣಗೊಂಡು ಉಳಿದಿರುವ ಸ್ವಾಮ್ಯತೆಯನ್ನು ಪ್ರಶ್ನಿಸಿದಂತಿರುವ ಕೆಲ ವರ್ಣನೆ, ಕಾಡುವ ಉಪಕಥೆಗಳ ಅಪೂರ್ಣತೆ, ಮಲ್ಟಿಮೀಡಿಯಾ ಪ್ರಭಾವದ ಕಥಾ ನೇಯ್ಗೆ ಇವು ಕಾದಂಬರಿಯ ವಿಶೇಷ ಕೌಶಲ, ಇಂತಹ ಎಪಿಕ್ಗಳ ಸೃಷ್ಟಿಬೇಕು ಏಕೆಂದರೆ ಇದು ಸಾಹಿತ್ಯ ತಪಸ್ಸಿನ ಕಾಲ.
ಶ್ರೀಮತಿ ಹರವು ಸ್ಫೂರ್ತಿಗೌಡ


‘ಆವರ್ತ’ ಕಾದಂಬರಿಯ ಕಾಲಮಾನ ಕ್ರಿಸ್ತಪೂರ್ವವೇ ಆದರೂ ಇಲ್ಲಿನ ಪಾತ್ರಗಳ ಸಂಬಂಧಗಳ ನಡುವಿನ ಸಂಕೀರ್ಣತೆ, ಯಜಮಾನಿಕೆಗಾಗಿ ಬಳಸುವ ಪಟ್ಟುಗಳು, ಪ್ರತಿರೋಧಗಳು, ಅಸ್ಮಿತೆಯ ತಲ್ಲಣಗಳು ಪ್ರಸ್ತುತ ಕಾಲಕ್ಕೂ ಸಲ್ಲುವಂತದ್ದು. ಪುರುಷ ನಿರೂಪಣೆಯ ಈ ಕಾದಂಬರಿಯಲ್ಲಿ ಪ್ರತೀಪನಿಗಿಂತ ಹೆಚ್ಚು ಧ್ವನಿಸುವುದು ಮಹಿಳೆಯರ ಪಾತ್ರಗಳೇ. ಅಚ್ಚುಕಟ್ಟು ನಿರೂಪಣೆಯೊಂದಿಗೆ ರೋಚಕತೆ ಕಟ್ಟಿಕೊಡುವ, ಬಹುಕಾಲ ಕಾಡುವ ಕಾದಂಬರಿ ಓದಿನ ಸುಖ ನನ್ನದು.
ದೀಪದಮಲ್ಲಿ
ಆಶಾ ರಘು ಅವರ ’ಆವರ್ತ’ ಕಾದಂಬರಿಯನ್ನು ನೋಡಿದೆ, ಓದಿದೆ, ಖುಷಿಪಟ್ಟೆ. ನನ್ನ ನೆಚ್ಚಿನ ಸೂರ್ಯನಾರಾಯಣ ಚಡಗರ ಹೆಸರಿನ ಪ್ರಶಸ್ತಿ ಪಡೆದ ಈ ಕಾದಂಬರಿಯನ್ನು ಪ್ರೀತಿಯಿಂದ ಕೈಗೆತ್ತಿಕೊಂಡೆ. ಒಂದೇ ಒಂದು ತಿಂಗಳಲ್ಲಿ ಅರವತ್ತು ಪ್ರತಿಯನ್ನು ಕೊಂಡು ಮಾರಾಟ ಮಾಡಿದೆ. ಓದಿದವರೆಲ್ಲರೂ ಖುಷಿಪಟ್ಟರು, ಆಶ್ಚರ್ಯಪಟ್ಟರು. ಇದಕ್ಕಿಂತ ಹೆಚ್ಚಿಗೆ ಇನ್ನೇನು ಹೇಳಲಿಕ್ಕಿದೆ ಈ ಕಾದಂಬರಿಯ ಮಹತ್ವದ ಬಗ್ಗೆ!
ಶ್ರೀ ಕು.ಗೋ. (ಹರ್ಗೆ ಗೋಪಾಲಭಟ್ಟ)


ನಿತ್ಯ ನಕ್ಷತ್ರಕನಂತೆ ಕಾಡುವ ಅರಿಷಡ್ ವರ್ಗಗಳ ಸುಳಿ ಚಕ್ರದಲ್ಲಿ ಸಿಲುಕಿ, ಹೊರಬರಲೂ ಆಗದೆ, ಇರಲೂ ಆಗದೆ ತಹತಹಿಸುವ ಮನುಷ್ಯನ ಅಸಹಾಯಕತೆ, ತುಮುಲ ಮತ್ತು ಮನಸ್ಸಿನ ಇಬ್ಬಂದಿತನಗಳ ಸಾಕ್ಷಿಪ್ರಜ್ಞೆಗೆ ಪ್ರತೀಪ ದೊರೆಯನ್ನು ಸಂಕೇತವಾಗಿ ಬಳಸಿಕೊಂಡು ಸಹೋದರಿ ಆಶಾ ರಘುರವರು ಬರೆದ ಈ ’ಆವರ್ತ’ ಕಾದಂಬರಿ ಅದ್ಭುತವಾಗಿದೆ. ಇಲ್ಲಿ ಲೌಕಿಕ ಮತ್ತು ಅಲೌಕಿಕ ಅನುಭವಗಳು ಪರಸ್ಪರ ಮುಖಾಮುಖಿಯಾಗುವ ಸನ್ನಿವೇಶಗಳಂತೂ ಓದುಗನನ್ನು ಬೆರಗುಗೊಳಿಸುತ್ತ, ಕುತೂಹಲವನ್ನು ಕೆರಳಿಸುತ್ತವೆ. ಪ್ರಥಮ ಪುರುಷ ಮತ್ತು ಉತ್ತಮ ಪುರುಷಗಳಲ್ಲಿ ಕಥಾ ನಿರೂಪಣೆ ಮಾಡುವ ಕಾದಂಬರಿಗಾರ್ತಿಯ ಶೈಲಿ ಅತ್ಯಾಕರ್ಷಕವಾಗಿದೆ. ಆವರ್ತ ಕಥೆ ಹೆಣೆಯುವ ತಂತ್ರಗಾರಿಕೆ ಮತ್ತು ಭಾಷೆಯನ್ನು ಬಳಸುವ ಜಾಣ್ಮೆಗೆ ಅಭಿನಂದಿಸಲೇಬೇಕು. ಒಟ್ಟಾರೆ ಇದೊಂದು ಸಾರಸ್ವತ ಲೋಕದ ಅತ್ಯುತ್ತಮ ಕಾದಂಬರಿ.
ಶ್ರೀ ವೈ.ಎಸ್.ಹರಗಿ
’ಆವರ್ತ’ ಒಂದು ಘನವಾದ ಕೃತಿ. ಅರಿಷಡ್ವರ್ಗಗಳನ್ನು ಪ್ರತಿಪಾದಿಸುವ ಈ ಕೃತಿ ಬಹಳ ಅರ್ಥಪೂರ್ಣವಾಗಿದೆ. ಸದಾ ಹೊಸತನದ ಅನ್ವೇಷಣೆಯಲ್ಲಿರುವ ನನ್ನಂತಹ ಓದುಗರಿಗೆ ನಮ್ಮ ಮೆದುಳನ್ನು ಪ್ರಚೋದಿಸುವ ಇಂತಹ ಕೃತಿಗಳು ಮಹತ್ವವನ್ನು ಪಡೆಯುತ್ತವೆ.
ಶ್ರೀಮತಿ ಭವಾನಿ ರಾಮನಾಥ್


ಇತಿಹಾಸ ಮತ್ತು ಪುರಾಣ ಪರಂಪರೆಯ ಬೆಳಕಿನಲ್ಲಿ ವರ್ತಮಾನವನ್ನು ಸಮರ್ಥವಾಗಿ ಅರ್ಥಮಾಡಿಸುವ ಬೃಹತ್ ಕಾದಂಬರಿ ‘ಆವರ್ತ’. ಅದಾವುದೋ ಕಾಲಘಟ್ಟದಲ್ಲಿ ನಡೆದಿರಬಹುದಾದ ಘಟನೆಗಳನ್ನು (ಹಳದಿ ಕಣ್ಣುಳ್ಳವರ ಮಧ್ಯೆ) ಸಮಕಾಲಿನಗೊಳಿಸಿ, ವಾಸ್ತವತೆಯ ನೆಲೆಯಲ್ಲಿ ಓದುಗನನ್ನು ಹಿಡಿದಿಡುವ ನಿಮ್ಮ ಬರವಣಿಗೆಯ ಕುಸುರಿ ಕೆಲಸಕ್ಕೆ ಹ್ಯಾಟ್ಸಾಫ್. ಪುರುಷವರ್ಗದ ಅಹಮಿಕೆಯನ್ನು ಹಣಿಯುವ ಸ್ತ್ರೀ ಪಾತ್ರಗಳ ಚಿತ್ರಣ, ಅಂಕೆಮೀರಿದ ಆತ ಅವುಗಳಲ್ಲೇ ಲೀನವಾಗುವ ರೀತಿ ‘ಆವರ್ತ’ದ ಬಹು ದೊಡ್ಡ ತಿರುವು ಮತ್ತು ಅನುಪಮ ಸಂದೇಶ. ಇಂತಹ ಅನನ್ಯ ಕಾದಂಬರಿ ಕೊಟ್ಟ ನಿಮಗೆ ಓದುಗರ ಪರವಾಗಿ ಅಭಿನಂದನೆಗಳು.
ಶ್ರೀ ದೊಡ್ಡಿಶಿವರಾಮ್
..ನಿಮ್ಮ ಬರಹಗಳಲ್ಲಿ ಸತ್ವವಿದೆ. ದೇವರು ನಿಮಗೆ ಅದ್ಭುತ ಪ್ರತಿಭೆ ಕರುಣಿಸಿದ್ದಾನೆ. ಆವರ್ತ ಅಮೋಘ ಕಾದಂಬರಿ. ನನ್ನ ನೆಚ್ಚಿನ ಓದುವ ಹವ್ಯಾಸ ಇರುವ ಗೆಳೆಯರಿಗೂ ಆವರ್ತ ಓದಲು ಕೊಟ್ಟಿದ್ದೇನೆ. ಎಲ್ಲರ ಒಮ್ಮತದ ಮತ ಸಹಮತ ಆವರ್ತ ಅದ್ಭುತ. ನಿಮ್ಮಿಂದ ಕನ್ನಡ ಸಾಹಿತ್ಯ ಸರಸ್ವತಿಗೆ ಅನಂತ ಬೆಲೆಯುಳ್ಳ ಸೇವೆ ನಡೆದೇ ನಡೆಯುತ್ತದೆ. ಆ ತಾಯಿಗೆ ಹಾಗೂ ಓದುಗರಿಗೆ ತೃಪ್ತಿ, ಸಂತಸ, ಹೆಮ್ಮೆ ಸಿಗುವುದರಲ್ಲಿ ಸಂಶಯವಿಲ್ಲ.
ಶ್ರೀ ಶ್ರೀನಿವಾಸ ಕುಂಡಂತಾಯ


ಆಶಾ ರಘು ಅವರ ’ಆವರ್ತ’ ಕಾದಂಬರಿಯಲ್ಲಿ, ಆಕೆಯ ಕಾಲ್ಪನಿಕ ಶಕ್ತಿ ಎಷ್ಟು ಅಗಾಧವಾಗಿಯೆಂದು ತಿಳಿದುಬರುತ್ತದೆ. ಪ್ರತಿಯೊಂದು ಪಾತ್ರಗಳೂ ಓದುಗರ ಮನಸ್ಸಿನಲ್ಲಿ ಅಚ್ಚಳಿಯದೆ ಇರುವಂತೆ ಬಹಳ ಅಚ್ಚುಕಟ್ಟಾಗಿ ವರ್ಣನೀಯವಾಗಿ ಪೋಣಿಸಿದ್ದಾರೆ. ಪಾತ್ರಗಳನ್ನು ಅರಿಷಡ್ವರ್ಗಗಳಿಗೆ ಹೋಲಿಸಿ ಕಥೆಯನ್ನು ಅರ್ಥಗರ್ಭಿವಾಗಿ ಪ್ರದರ್ಶಿಸಿದ್ದಾರೆ. ಸಾಮಾನ್ಯರಿಗೆ ಈ ಗ್ರಂಥವನ್ನು ಅರಗಿಸಿಕೊಳ್ಳುವುದು ಕ್ಲಿಷ್ಟಕರವೆನಿಸಿದರೂ ಸಮಾಧಾನಚಿತ್ತರಾಗಿ ಓದಿದರೆ ಚಿತ್ರಣಗಳು ಕಣ್ಣೆದುರಿಗೇ ಬಂದಂತಾಗುತ್ತದೆ.
ಶ್ರೀ ಎಂ.ಆರ್.ಮುಕುಂದ
ಎಳೆ ಕಡಿಯದಂತೆ ಒಂದು ಸೂತ್ರದಲ್ಲಿ ಲೇಖಕಿ ಎಲ್ಲಾ ಪಾತ್ರಗಳನ್ನು ಚೆನ್ನಾಗಿ ಹೆಣೆದುಕೊಂಡು ಹೋಗಿದ್ದಾರೆ. ಕಾದಂಬರಿಯಲ್ಲಿ ಬರುವ ಸಣ್ಣ ಸಣ್ಣ ಪಾತ್ರಗಳು ಕೂಡ ಕೊಡುವ ಅನುಭವ ಅನನ್ಯ. ಈ ಶತಮಾನದಲ್ಲಿ ಇದ್ದುಕೊಂಡು ಯಾವುದೋ ಶತಮಾನದ ಕಾಲದೊಳಗೆ ಹೊಕ್ಕು ಬರೆಯುವ ಕಲೆ ಕಷ್ಟತರವಾದದ್ದು. ಲೇಖಕಿ ಅದನ್ನು ದಾಟಿ ಯಶಸ್ವಿಯಾಗಿದ್ದಾರೆ. ಈ ಕಾದಂಬರಿಯಲ್ಲಿ ಲೇಖಕಿಯ ಅಪಾರ ಓದಿನ ಆಳ ಹಾಗು ಈ ಕಾದಂಬರಿಯಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡುದುದನ್ನು ಸುಲಭದಲ್ಲಿ ಗ್ರಹಿಸಬಹುದು.
ಶ್ರೀಮತಿ ವಿಭಾ ಕೃಷ್ಣ ಉಳಿತ್ತಾಯ


ತನ್ನ ಕಾಲವನ್ನು ಬಿಟ್ಟು ಮತ್ತೊಂದು ಕಾಲಕ್ಕೆ ಜಿಗಿದು, ಕಥೆ ಕಟ್ಟುವ ಕಾರ್ಯ ಸವಾಲಿನದೇ ಸರಿ!
ಶ್ರೀ ಚೀಮನಹಳ್ಳಿ ರಮೇಶ್ ಬಾಬು
ಆಶಾ ರಘುರವರ ಕಥನಕ್ರಮ, ನಿರೂಪಣಾ ಶೈಲಿ, ಪಾತ್ರಗಳ ಚಿತ್ರಣ, ಕಲ್ಪನಾ ಶಕ್ತಿ ಅದ್ಭುತವಾಗಿದೆ.
ಶ್ರೀ ಕಗ್ಗೆರೆ ಪ್ರಕಾಶ್


ಆಶಾ ರಘು ಪ್ರಸ್ತುತ ಕನ್ನಡದ ಪ್ರಮುಖ ಬರಹಗಾರ್ತಿ. ’ಆವರ್ತ’ ಕಾದಂಬರಿ ಬಹಳ ಕಾಲದ ಹಿಂದೆಯೇ ನಾಗಸುಧೆ ಜಗುಲಿಗೆ ಬಂದ ಪುಸ್ತಕ. ಇಂತಹ ಬೃಹತ್ ಗಾತ್ರದ ಕೃತಿ ರಚಿಸಿದ ಅವರ ತಾಳ್ಮೆಯೇ ನಮಗೊಂದು ಬೆರಗು.
ಶ್ರೀ ಕಡಮೆ ಪ್ರಕಾಶ್
ಲಾಕ್ಷಿಗೂ ಭಾವನೆಗಳಿತ್ತೋ ಇಲ್ಲವೋ..? ಮೊದಲೆರಡು ಬಾರಿ ’ಆವರ್ತ’ ಓದಿದಾಗ ಪ್ರತೀಪ ಹೀರೋ ಅನಿಸಿದ್ದು ನಿಜ. ಆಗ ಲಾಕ್ಷಿಯ ಅಂತರಂಗ ತಟ್ಟಿರಲಿಲ್ಲ. ಪ್ರತೀಪನ ಜಾಗದಲ್ಲಿ ನನ್ನನ್ನೇ ನೋಡುತ್ತಿದ್ದೆ. ಆದರೆ ಕಾಲ ಬದಲಾಗುತ್ತಿದ್ದಂತೆ ಯಾಕೋ ಲಾಕ್ಷಿಯ ಪುಟಗಳನ್ನು ಮತ್ತೊಮ್ಮೆ ಓದುತ್ತಿರುವೆ. ಎಲ್ಲೋ ಸ್ವಲ್ಪ ಅವಳ ಅಂತರಂಗ ಇನ್ನೊಂದು ಮಜಲಲ್ಲಿ ಬೇರೊಂದು ರೂಪದಲ್ಲಿ ಬಂದಿದ್ದರೆ ಚೆನ್ನವಿತ್ತೇನೋ ಅನ್ನಿಸುತ್ತಿದೆ. ಯಾಕೋ ಎಲ್ಲಾ ಪಾತ್ರಗಳನ್ನು ತೂಗಿಸಿ ಕೊನೆಗೆ ಲಾಕ್ಷಿಯ ಪಾತ್ರ ದುರಂತ ಆಯಿತು ಅನ್ನಿಸಿತು. ಎಲ್ಲೋ ಅರಿಷಡ್ವರ್ಗಗಳ ಕಲ್ಪನೆಯ ಪಾತ್ರದಲ್ಲಿ ಲಾಕ್ಷಿಗೆ ಕೊನೆಯ ಸ್ಥಾನವೇ? ಯಾಕೋ ಒಮ್ಮೆ ಲಾಕ್ಷಿಯಾಗಿ ನನ್ನನು ನಾನು ನಿಂತು ನೋಡಲೇ ಎಂದೆನಿಸುತ್ತಿದೆ.
ಆವರ್ತ ನಿಜಕ್ಕೂ ನನ್ನ ಬದುಕಿನ ದಿಕ್ಕನ್ನು ಬದಲಿಸಿದ್ದು ನನ್ನ ಸಮೀಪವರ್ತಿಗಳಲ್ಲಿ ಇಂದಿಗೂ ಸೋಜಿಗ. ಅಂದಿನಿಂದ ನಿಮ್ಮ ಅಭಿಮಾನಿಯಾದೆ. ಅಂದಿನ ಚಂದ್ರು ಬೇರೆ, ಈಗ ನನ್ನನ್ನು ಅವರುಗಳು ನನ್ನನ್ನು ನೋಡುವ ರೀತಿಯೇ ಬೇರೆ, ಇದು ಅವರ್ತದ ಶಕ್ತಿ.
ಶ್ರೀ ಚಂದ್ರಶೇಖರ್ ಕುಲಗಾಣ


‘ಆವರ್ತ’ ಕಾದಂಬರಿಯಲ್ಲಿ ಕಾಲ, ದೇಶಗಳ ಮಿತಿಯನ್ನು ಮೀರಿ ಬೆಳೆದಿರುವ ಪಾತ್ರಗಳು, ಸನ್ನಿವೇಶಗಳು, ಕಾದಂಬರಿಯುದ್ದಕ್ಕೂ ಸದಾ ಮನುಷ್ಯನ ಹೊರ ಜಗತ್ತು ಮತ್ತು ಒಳ ಜಗತ್ತು ಸಂವಾದಿಸಿದಂತೆ ತೋರುತ್ತದೆ, ಓದುಗನನ್ನು ಜಿಜ್ಞಾಸೆಗೆ ಒಡ್ಡುತ್ತದೆ.
ಶ್ರೀಮತಿ ಗೀತಾ ಕುಂದಾಪುರ
ವಿಸ್ತಾರವಾದ ಕಥಾಹಂದರ, ಅದರ ಎಳೆಗಳನ್ನು ಸಹಜವೆಂಬಂತೆ ಹೆಣೆದಿರುವ ನಿನ್ನ ಅಗಾಧ ಕಲ್ಪನೆ ಮತ್ತು ಸ್ವಾರಸ್ಯಕರ ನಿರೂಪಣೆಯ ನಿನ್ನ ಜನ್ನಜಾತ ಪ್ರತಿಭೆಗೆ ಯಾರಾದರೂ ತಲೆದೂಗಲೇಬೇಕು. ವೈವಿಧ್ಯಮಯ ಪಾತ್ರಗಳ ಹೊರಬಾಳಿನಷ್ಟೇ ಒಳಬಾಳನ್ನೂ ಸೂಕ್ಷ್ಮವಾಗಿ ಹಿಡಿದಿಟ್ಟಿರುವ ನಿನ್ನ ಚಿತ್ರಕ ಶಕ್ತಿ ನನಗೆ ತುಂಬಾ ಮೆಚ್ಚುಗೆಯಾಯಿತು, ಹಾಗೆಯೇ ಪುರುಷಾಹಂಕಾರಕ್ಕೆ ಸಮಸಮವಾಗಿ ಅದನ್ನು ಬಗ್ಗುಬಡಿಯುವ ಸ್ತ್ರೀಶಕ್ತಿಯ ನಿನ್ನ ಸಮನ್ವಯ ಸಹ.
ಡಾ. ಬಿ.ಆರ್.ಲಕ್ಷ್ಮಣರಾವ್


ಯಕ್ಷಗಾನ ಪ್ರಸಂಗಕರ್ತರಿಗೆ ಇದೊಂದು ಉತ್ತಮಕಥೆ ಎಂದು ನಾನು ಭಾವಿಸಿದ್ದೇನೆ. ಇದರ ಆಧಾರದ ಮೇಲೆ ರಾತ್ರಿ ಇಡೀ ಆಡಿತೋರಿಸಲು ಒಂದು ಒಳ್ಳೆಯ ಯಕ್ಷಗಾನ ಪ್ರಸಂಗ ರಚಿಸಬಹುದಾಗಿದೆ.
ಶ್ರೀ ನೀಲಾವರ ಸುರೇಂದ್ರ ಅಡಿಗ
ಇದನ್ನು ಶ್ರೀಮತಿ ಆಶಾ ರಘು ಅವರ ಮೊದಲ ಕೃತಿ ಎಂದು ಮುಂತಾಗಿ ಗುರುತಿಸಲಾಗದು. ಏಕೆಂದರೆ ಇಂತಹ ಕೃತಿ ರಚನೆಯ ಮುನ್ನ ಸಾಹಿತ್ಯ, ಸಂಗೀತ, ಕಲೆ, ರಂಗ ಮತ್ತು ತತ್ವಶಾಸ್ತ್ರೀಯ ಕ್ಷೇತ್ರಗಳಲ್ಲಿ ದುಡಿದು ಗಳಿಸಿದ್ದನ್ನು ಇಲ್ಲಿ ಪ್ರಯೋಗಿಸಿರುವ ಸ್ಪಷ್ಟ ಸೂಚನೆಯನ್ನು ಈ ಕೃತಿಯೇ ನೀಡುತ್ತದೆ.
ಡಾ. ಎಸ್. ನಟರಾಜ ಬೂದಾಳು


ಶ್ರೀಮತಿ ಆಶಾ ರಘು ಅವರ ಈ ಕಾದಂಬರಿಯ ರಚನಾ ಸಮಯದ ಘನೀಕೃತ ಸಂಯಮದ ಮನಸ್ಥಿತಿಗೆ ದೊಡ್ಡ ನಮಸ್ಕಾರ. ಎಸ್.ಎಲ್.ಭೈರಪ್ಪರ ಸಾರ್ಥದ ಅನಂತರ ಅದೇ ಸಂವೇದನೆಯ ಓದನ್ನು ಕೊಟ್ಟ ಅನಂತರದ ಕೃತಿ ’ಆವರ್ತ’.
ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ
ಎಷ್ಟೋ ವರ್ಷಗಳ ನಂತರ – ಕನ್ನಡದ ನೆಲದ ಒಬ್ಬ ಲೇಖಕಿಯ ಶಿಷ್ಟ ಬರಹದ ದೃಷ್ಟಾಂತದಂತಿರುವ ಕಾದಂಬರಿ – ’ಆವರ್ತ’. ಲೇಖಕಿಯು ತನ್ನ ಮನಸ್ಸಂತೋಷಕ್ಕಾಗಿ ದೀರ್ಘಕಾಲ ಶಾಸ್ತ್ರೀಯವಾಗಿ ಕನ್ನಡದ ಉಪಾಸನೆ ನಡೆಸಿದ್ದನ್ನು ’ಆವರ್ತ’ ಕಾದಂಬರಿಯ ಬರಹವೇ ಹೇಳುತ್ತದೆ.
–ಮತಿ ನಾರಾಯಣೀ ದಾಮೋದರ್


ಆಶಾ ಅವರು ತದೇಕ ಧ್ಯಾನ, ಏಕಾಗ್ರತೆಗಳ ತಪಸ್ಸಿನಿಂದ ಐದು ವರ್ಷಗಳ ಕಾಲ ಸತತವಾಗಿ ವಸ್ತುವಿನೊಡನೆ ತಾದ್ಯಾತ್ಮತೆ ಸಾಧಿಸಿ, ಈ ಬೃಹತ್ ಕೃತಿ ರಚಿಸಿದ್ದಾರೆ.
ಶ್ರೀ ಸಂಪಿಗೆ ತೋಂಟದಾರ್ಯ
ಡಾ.ಎಸ್.ಎಲ್.ಭೈರಪ್ಪನವರು ಹೇಳಿರುವಂತೆ ಒಂದು ಕಾದಂಬರಿಯ ಆಶಯ ಸಮಾಜ ಸುಧಾರಣೆಯಾಗಲಿ, ನೀತಿ ಬೋಧೆಯಾಗಲೀ ಅಗಬೇಕಿಲ್ಲ, ಬೇಕಾಗಿರುವುದು – ಅದು ಎಷ್ಟರ ಮಟ್ಟನ ರಸಾಸ್ವಾದನೆಯನ್ನು ಓದುಗರಿಗೆ ನೀಡುತ್ತದೆ ಎಂಬುದು. ಅಂತಹ ಅವಶ್ಯಕತೆಯನ್ನು ಈ ಕಾದಂಬರಿ ಪೂರೈಸಿದೆ ಎನ್ನುವಲ್ಲಿ ಎರಡು ಮಾತಿಲ್ಲ.
ಶ್ರೀ ಭಗವಾನ್ ಕೆ.ನಾರಾಯಣ


‘ಮನುಷ್ಯನ ಬದುಕಿನಲ್ಲಿ ಮತ್ತೆ ಮತ್ತೆ ಆವರ್ತನಗೊಳ್ಳುವ ಸಂಗತಿ ಎನ್ನುವ ಅರ್ಥದಲ್ಲಿ ‘ಆವರ್ತ’ ಅನ್ನುವ ಶೀರ್ಷಿಕೆ ಬಹಳ ಅರ್ಥಪೂರ್ಣವಾಗಿದೆ. ಗತಕಾಲದ ಸಾಮಾಜಿಕ ಬದುಕಿನ ಉತ್ಖನನ ಮಾಡಿ ವಿವರಗಳನ್ನು ಶೋಧಿಸಿ ಸೂಕ್ತ ರೀತಿಯಲ್ಲಿ ಜೋಡಿಸುವುದು ತಂತಿಯ ಮೇಲೆ ನಡೆಯುವಂಥ ಅತೀವ ಪ್ರಯಾಸದ ಕೆಲಸ. ಆಶಾ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಡಾ.ಪಾರ್ವತಿ ಜಿ.ಐತಾಳ್
ʻಆವರ್ತʼ, ಆಶಾ ರಘು ಅವರ ಮಹತ್ವಾಕಾಂಕ್ಷೆಯ ಕಾದಂಬರಿ, ಕೇವಲ ದೀರ್ಘ ಕಥನವಲ್ಲ. ಅದೊಂದು ಸಾಂಸ್ಕೃತಿಕ ದಾಖಲೆಯಂತಿದೆ. ಅವರ ಪರಿಶ್ರಮ ಕಾದಂಬರಿಗೆ ಇನ್ನಿಲ್ಲದ ಅಧಿಕೃತ ಮುದ್ರೆಯಾಗಿದೆ. ಮಹಾಭಾರತ ಹೇಗೆ ಎಲ್ಲ ಕಾಲದಲ್ಲೂ ಪ್ರಸ್ತುತವೋ ಹಾಗೆಯೇ, ಮನೋವ್ಯಾಪಾರಗಳನ್ನು ತೆರೆದಿಡುವ ʻಆವರ್ತʼ ನಮ್ಮೆಲ್ಲರಿಗೂ ಕನ್ನಡಿಯಂತೆ ಆಗಬಹುದು ಎಂಬುದು ನನ್ನ ಬಲವಾದ ಅನಿಸಿಕೆ.
ಶ್ರೀಮತಿ ನಿವೇದಿತಾ.ಎಚ್.ವಿಜಯ್
